ಶಾಸಕ ಭರತ್ ಶೆಟ್ಟಿಗೆ ವಿಚಾರಣೆಗೆ ನೋಟಿಸ್

mla bharath
Published on

ಮಂಗಳೂರು: ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಮಾತನಾಡಿದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ ಬೆನ್ನಿಗೇ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಕಾವೂರು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.


ಮೂರು ದಿನಗಳೊಳಗೆ ವಿಚಾರಣೆಗೆ ಹಾಜರಾಗುವಂತೆ ಠಾಣಾ ಇನ್‌ಸ್ಪೆಕ್ಟರ್ ರಾಘವೇಂದ್ರ ಬೈಂದೂರು ಅವರು ಗುರುವಾರ ನೋಟಿಸ್ ಜಾರಿ ಮಾಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್ ನೀಡಿದ ದೂರಿನ ಮೇರೆಗೆ ಶಾಸಕ ಡಾ.ಭರತ್ ಶೆಟ್ಟಿ ವಿರುದ್ಧ ಮಂಗಳವಾರ ರಾತ್ರಿ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) 353 ಸೆಕ್ಷನ್ ಅಡಿಯಲ್ಲಿ ಕಾವೂರು ಠಾಣೆಯಲ್ಲಿ ಕೇಸು
ದಾಖಲಿಸಲಾಗಿತ್ತು.


ಲೋಕಸಭೆಯಲ್ಲಿ ಹಿಂದು ನಿಂದನೆಗಾಗಿ ರಾಹುಲ್ ಗಾಂಧಿ ವಿರುದ್ಧ ಕಾವೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ರಾಹುಲ್ ಗಾಂಧಿ ಬಗ್ಗೆ ಕೇಳಿದರೆ ಲೋಕಸಭೆಯಲ್ಲಿ ಕೆನ್ನೆಗೆ ಬಾರಿಸಬೇಕಿತ್ತು ಎಂದು ಅನಿಸುತ್ತಿದೆ ಎಂದು ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ಮುಖಂಡರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತಲ್ಲದೆ, ಡಾ.ಭರತ್ ಶೆಟ್ಟಿ ವಿರುದ್ಧ ಸ್ವಯಂ ಪ್ರೇರಿತ ಕೇಸು ದಾಖಲಿಸುವಂತೆ ಒತ್ತಾಯಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net