

ಮಂಗಳೂರು: ಭರತನಾಟ್ಯ ಕಲಾವಿದೆಯಾಗಿ, ಗುರುವಾಗಿ, ಜತೆಗೆ ವಿವಿಧ ಕಲಾ ಪ್ರಕಾರಗಳಲ್ಲಿನ ತಮ್ಮ ತೊಡಗಿಸಿಕೊಳ್ಳುವಿಕೆಯ ಹಿನ್ನೆಲೆಯಲ್ಲಿ ವಿ. ಸುಮಂಗಲಾ ರತ್ನಾಕರ್ ರಾವ್ ಕನ್ನಡ ಭಾಷೆಯಲ್ಲಿ ನೃತ್ಯಬಂಧಗಳನ್ನು ರಚಿಸಿ ನೃತ್ಯ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅನನ್ಯ ಎಂದು ಮಂಗಳೂರು ಸೌರಭ ಕಲಾ ಪರಿಷತ್ ಗುರು ವಿ. ಡಾ.ಶ್ರೀವಿದ್ಯಾ ಮುರಳೀಧರ್ ಶ್ಲಾಘಿಸಿದರು.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಭಾನುವಾರ ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ,ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿಯ ಸಹಕಾರದೊಂದಿಗೆ ನಡೆದ ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವದ ನೃತ್ಯಾಮೃತ 11 ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.
ಮೂರು ವಿಭಿನ್ನ ಭಾವಗಳ ಪದವರ್ಣಗಳನ್ನು ( ಶೃಂಗಾರ, ಭಕ್ತಿ ಮತ್ತು ದೇಶ ಭಕ್ತಿ) ನಾಡಿನ ಹೆಸರಾಂತ ಕಲಾವಿದರ ಮೂಲಕ ತ್ರಿವರ್ಣ ದೀಪ ಕಾರ್ಯಕ್ರಮದಲ್ಲಿ ಬೆಳಕಾಗಿಸಿದ್ದು ಅಭಿನಂದನೀಯ ಎಂದರು.
ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಶ್ರೀಶಾ ಸೌಹಾರ್ದ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿಯ ಸ್ಥಾಪಕಾಧ್ಯಕ್ಷ ಎಂ.ಎಸ್.ಗುರುರಾಜ್ ಉದ್ಘಾಟಿಸಿದರು. ಬಾಬಾ ಅಟಾಮಿಕ್ ಸೆಂಟರ್ ತಾರಾಪುರದ ನಿವೃತ್ತ ಎ.ಜಿ.ಎಂ ವಿಶ್ವರಾಜ್ ಐ, ಸಾಹಿತಿ ಮತ್ತು ಬೆಸೆಂಟ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ, ಮುಸ್ಲಿಂ ವಸತಿ ಶಾಲೆ ಅಸೈಗೋಳಿಯ ಶಿಕ್ಷಕ ಮಂಜುನಾಥ ಭಟ್, ನೃತ್ಯ ನಿಕೇತನ ಉಡುಪಿಯ ನಿರ್ದೇಶಕಿ ಗುರು ವಿ.ಲಕ್ಷ್ಮೀ ಗುರುರಾಜ್, ನಾಟ್ಯಾರಾಧನಾ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿಗಳಾದ ವಿ. ಡಾ.ಚೈತ್ರಶ್ರೀ ಗುರುರಾಜ್ ಹಾಗೂ ವಿ. ನೇಹಾ ವೈ ದೇವಾಡಿಗ, ಸಂಸ್ಥೆಯ ಟ್ರಷ್ಠಿ ಬಿ.ರತ್ನಾಕರ್ ರಾವ್ ಅತಿಥಿಗಳಾಗಿದ್ದರು.
ಗಾನ ನೃತ್ಯ ಅಕಾಡೆಮಿಯ ಗುರು ವಿ. ವಿದ್ಯಾಶ್ರೀ ರಾಧಾಕೃಷ್ಣ (ಶೃಂಗಾರ ಭಾವ), ಪುತ್ತೂರಿನ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡಮಿಯ ನೃತ್ಯಕಲಾ ದಂಪತಿ ವಿ. ದೀಪಕ್ ಕುಮಾರ್ ಮತ್ತು ಪ್ರೀತಿಕಲಾ ದೀಪಕ್ ( ಭಕ್ತಿ ಭಾವ) ಮತ್ತು ನಾಟ್ಯಾರಾಧನಾ ಕಲಾ ಕೇಂದ್ರದ ವಿದ್ಯಾರ್ಥಿಗಳಾದ ವೃಂದ ರಾವ್ , ಸಾಧ್ವಿ ರಾವ್, ಧರಿತ್ರಿ ಭಿಡೆ, ಹಂಸಿನಿ ಭಿಡೆ ಹಾಗೂ ತನ್ವಿ ಪಿ ಬೋಳೂರು ( ದೇಶಭಕ್ತಿ ಭಾವ) ಪದವರ್ಣ ಪ್ರಸ್ತುತ ಪಡಿಸಿ ಜನಮನ ಗೆದ್ದರು.
ನಾಟ್ಯಾರಾಧನಾ ವಿದ್ಯಾರ್ಥಿ ವೃಂದದಿಂದ ಹಚ್ಚೇವು ಕನ್ನಡದ ದೀಪ ನೃತ್ಯ ಪ್ರಸ್ತುತಿಗೊಂಡು ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿತು.
ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿಯ ಡಾ. ಗಣೇಶ್ ಅಮೀನ್ ಸಂಕಮಾರ್ ಪ್ರಸ್ತಾವನೆಗೈದರು , ವಿ.ಸುಮಂಗಲಾ ರತ್ನಾಕರ್ ರಾವ್ ಸ್ವಾಗತಿಸಿದರು. ಶಶಿರಾಜ್ ರಾವ್ ಕಾವೂರು ವಂದಿಸಿದರು. ಭವ ಅಮೀನ್ ಸಂಕಮಾರ್ ಕಾರ್ಯಕ್ರಮ ನಿರೂಪಿಸಿದರು.