ಗಾಯನ, ನೃತ್ಯದಿಂದ ದೇವರು ಪ್ರಸನ್ನ ನಾಟ್ಯಾರಾಧನಾ ತ್ರಿಂಶೋತ್ಸವ ಉದ್ಘಾಟಿಸಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ

townhall
Published on

ಮಂಗಳೂರು: ಧರ್ಮ ಮತ್ತು ಸಂಸ್ಕೃತಿ ಬೆರೆತರೆ ಪ್ರತಿಯೊಬ್ಬ ಮಾನವನನ್ನು ಆಸ್ತಿಕರನ್ನಾಗಿಸುತ್ತವೆ. ಪೂಜೆ ದೇವರನ್ನು ತೃಪ್ತಿಗೊಳಿಸಿದರೆ, ಗಾಯನ ಹಾಗೂ ನೃತ್ಯ ಪ್ರಸನ್ನಗೊಳಿಸುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.


ಮಂಗಳೂರಿನ ನಾಟ್ಯಾರಾಧನಾ ಕಲಾ ಕೇಂದ್ರದ 30ನೇ ವರ್ಷದ ಸಂಭ್ರಮ ಹಿನ್ನೆಲೆಯಲ್ಲಿ ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿ ಸಹಯೋಗದಲ್ಲಿ ನಗರದ ಪುರಭವನದಲ್ಲಿ ಗುರುವಾರ ನಾಟ್ಯಾರಾಧನಾ ತ್ರಿಂಶೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.


ನಾಟ್ಯಾರಾಧನಾ ಕಲಾ ಕೇಂದ್ರದ ನೃತ್ಯಗುರು ವಿದುಷಿ ಸುಮಂಗಲಾ ರತ್ನಾಕರ ರಾವ್ ಅವರು ಕಳೆದ 30 ವರ್ಷಗಳಿಂದ ಭರತನಾಟ್ಯ ಕಲಿಸುವ ಮೂಲಕ ನಮ್ಮ ಸಂಸ್ಕೃತಿಯ ಉಳಿವಿಗೆ ಶ್ರಮಿಸಿದ್ದಾರೆ. ಬಹುಮುಖ ಪ್ರತಿಭೆಯಾದ ಅವರು ಭರತನಾಟ್ಯದ ಜತೆಗೆ ಯಕ್ಷಗಾನದಲ್ಲೂ ಗುರುತಿಸಿಕೊಂಡಿರುವುದು ಸ್ತುತ್ಯರ್ಹ. ನಾಟ್ಯಾರಾಧನಾ ತ್ರಿಂಶೋತ್ಸವ ಸಂಭ್ರಮದ ವರ್ಷಪೂರ್ತಿ ಕಾರ್ಯಕ್ರಮಗಳು ಯಶಸ್ಸು ಪಡೆಯಲಿ ಎಂದು ಶುಭ ಹಾರೈಸಿದರು.
ಹಿರಿಯ ಭರತನಾಟ್ಯ ಗುರು ಉಳ್ಳಾಲ ಮೋಹನ್ ಕುಮಾರ್, ವಿ.ಚಂದ್ರಶೇಖರ ನಾವಡ ಸುರತ್ಕಲ್, ವಿ.ಶಾರದಾಮಣಿ ಶೇಖರ್, ವಿ.ಗೀತಾ ಸರಳಾಯ ಕದ್ರಿ, ವಿ.ಕಾವ್ಯ ಭಟ್ ಪೆರ್ಲ ಮುಖ್ಯ ಅತಿಥಿಗಳಾಗಿದ್ದರು. ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಅಧ್ಯಕ್ಷ ಡಾ.ಗಣೇಶ್ ಅಮೀನ್ ಸಂಕಮಾರ್ ಅಧ್ಯಕ್ಷತೆ ವಹಿಸಿದ್ದರು.


ತ್ರಿಂಶೋತ್ಸವ ಸಮಿತಿ ಕಾರ್ಯದರ್ಶಿ ವಿದುಷಿ ಸುಮಂಗಲಾ ರತ್ನಾಕರ ರಾವ್ ಸ್ವಾಗತಿಸಿದರು. ಸಮಿತಿಯ ಗೌರವಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಕೋಶಾಕಾರಿ ಬಿ.ರತ್ನಾಕರ್ ರಾವ್, ಸಂಘಟನಾ ಕಾರ್ಯದರ್ಶಿ ಶಶಿರಾಜ್ ಕಾವೂರು, ವಿದ್ಯಾರ್ಥಿ ಸಮಿತಿ ಕಾರ್ಯದರ್ಶಿ ವಿ.ಮಲ್ಲಿಕಾ ವೇಣುಗೋಪಾಲ್ ಉಪಸ್ಥಿತರಿದ್ದರು. ನಮೃತಾ ರಾಕೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಬಳಿಕ ನಾಟ್ಯಾರಾಧನಾ ಕಲಾ ಕೇಂದ್ರದ ಅರಳು ಪ್ರತಿಭೆಗಳಾದ ವಿ. ಶೋಧನ್ ಕುಮಾರ್ ಬಿ, ವಿ. ಸತ್ಯನುಶ್ರೀ ರಾವ್,ಜಾಹ್ನವಿ ಶೆಟ್ಟಿ, ವೃಂದಾ ಜಿ. ರಾವ್, ಸಮನ್ವಿತಾ ರಾವ್, ಸಾಧ್ವೀ ರಾವ್ ಟಿ., ಧರಿತ್ರೀ ಭಿಡೆ, ತನ್ವಿ ಪಿ. ಬೋಳೂರು ಅವರಿಂದ ಗುರು ಸುಮಂಗಲಾ ರತ್ನಾಕರ್ ರಾವ್ ನಿರ್ದೇಶನದಲ್ಲಿ ನೃತ್ಯ ವಂದನಾ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net