

ಮಂಗಳೂರು: ಮೆದುಳು ಚುರುಕಾಗಿ ಬೌದ್ಧಿಕ ವಿಕಸನಗೊಳ್ಳಲು ಚೆಸ್ ಆಟ ಪೂರಕ ಎಂದು ಎಂಆರ್‌ಪಿಎಲ್‌ನ ಜಿಜಿಎಂ (ಎಚ್‌ಆರ್) ಕೃಷ್ಣ ಹೆಗ್ಡೆ ಹೇಳಿದರು.
ದಕ್ಷಿಣ ಕನ್ನಡ ಚೆಸ್ ಅಸೋಸಿಯೇಶನ್ ಮಂಗಳೂರು ವತಿಯಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ ರಾಷ್ಟ್ರೀಯ ಓಪನ್ ರಾಪಿಡ್ ರೇಟೆಡ್ ಚೆಸ್ ಪಂದ್ಯಾವಳಿ ಎಂಆರ್‌ಪಿಎಲ್ ಟ್ರೋಫಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಎಸೋಸಿಯೇಶನ್ ಗೌರವಾಧ್ಯಕ್ಷ ಸುನಿಲ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಚದುರಂಗ ಭಾರತದಲ್ಲಿ ಪುರಾತನ ಕ್ರೀಡೆ. ಹೊಸ ಧನಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಲು ಚೆಸ್ ಪಂದ್ಯಾಟ ಸಹಕಾರಿ ಎಂದರು.
ಪುತ್ತೂರು ಜೀನಿಯಸ್ ಚೆಸ್ ಸ್ಕೂಲ್ ಸ್ಥಾಪಕ ಸತ್ಯಪ್ರಸಾದ್ ಕೋಟೆ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಚೆಸ್ ಅಸೋಸಿಯೇಶನ್ ಚೆಸ್ ಪಂದ್ಯಾವಳಿಗೆ ಹೆಚ್ಚಿನ ಮಹತ್ವ ನೀಡಿದ್ದು, ಜಿಲ್ಲೆಯ ಸಂಪೂರ್ಣ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸಿದೆ ಎಂದರು.
9 ಸುತ್ತುಗಳ ಪಂದ್ಯಾವಳಿಯಲ್ಲಿ ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳ ಸುಮಾರು 350ಕ್ಕಿಂತಲೂ ಅಧಿಕ ಮಂದಿ ಭಾಗವಹಿಸಿದ್ದಾರೆ. ಅದರಲ್ಲೂ 4 ವರ್ಷದ ಮಕ್ಕಳಿಂದ ಹಿರಿಯರವರೆಗೂ ಭಾಗವಹಿಸಿದ್ದು ವಿಶೇಷವಾಗಿತ್ತು. ಟೂರ್ನಿಯಲ್ಲಿ 2.4 ಲಕ್ಷ ನಗದು ಬಹುಮಾನ, ವಿವಿಧ ವಿಭಾಗಗಳ ಟ್ರೋಫಿ ಜತೆಗೆ ಸುಮಾರು ನೂರೈವತ್ತಕ್ಕೂ ಮಿಕ್ಕಿ ಬಹುಮಾನಗಳು ಇರಲಿವೆ. ಗುರುವಾರದಂದು ಬ್ಲಿಟ್ಜ್ ಟೂರ್ನಮೆಂಟ್ ನಡೆಯಲಿದೆ.
ಪಂದ್ಯಾವಳಿಯ ಸಲಹಾ ಸಮಿತಿ ಸದಸ್ಯೆ ಡಾ. ಅಮರಶ್ರೀ ಎ. ಶೆಟ್ಟಿ, ಅಸೋಸಿಯೇಶನ್ ಖಜಾಂಚಿ ಪೂರ್ಣಿಮಾ ಎಸ್.ಆಳ್ವ, ಸಹ ಖಜಾಂಚಿ ರಮ್ಯಾ ಎಸ್ ರೈ ಮೊದಲಾದವರಿದ್ದರು.
ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ ಸ್ವಾಗತಿಸಿ, ವಾಣಿ ಎಸ್. ಪಣಿಕ್ಕರ್ ನಿರೂಪಿಸಿದರು. ಅಬಿಷೇಕ್ ಕಟ್ಟೆಮಾರ್ ವಂದಿಸಿದರು.