

ಮಂಗಳೂರು: ನಮ್ಮ ಕುಡ್ಲ ವಾಹಿನಿಯ ವತಿಯಿಂದ 25ನೇ ವರ್ಷದ ಗೂಡುದೀಪ ಸ್ಪರ್ಧೆ ಅ.30ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆವರಣದಲ್ಲಿ ನಡೆಯಲಿದೆ.
ಸ್ಪರ್ಧೆಯು ಯಾವುದೇ ವಯೋಮಾನದ ನಿಬರ್ಂಧವಿಲ್ಲದೆ ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದ್ದು, ಪ್ರತಿಯೊಂದು ವಿಭಾಗದಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ಚಿನ್ನದ ಪದಕ ಹಾಗೂ ತೃತೀಯ ಸ್ಥಾನ ಪಡೆದ ಮೂವರು ವಿಜೇತರಿಗೆ ಬೆಳ್ಳಿಯ ಪದಕ ಹಾಗೂ 50 ಪ್ರೋತ್ಸಾಹಕ ಬಹುಮಾನಗಳಿವೆ. ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ಧಿಗೂ ನೆನಪಿನ ಕಾಣಿಕೆಯ ಜೊತೆಗೆ ಸಿಹಿತಿಂಡಿಯ ಪೊಟ್ಟಣ ಹಾಗೂ ಶ್ರೀ ಕ್ಷೇತ್ರದ ಪ್ರಸಾದ ನೀಡಿ ಗೌರವಿಸಲಾಗುವುದು ಎಂದು ಸಂಘಟಕ ಕದ್ರಿ ನವನೀತ ಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕಳೆದ ನಾಲ್ಕೂವರೆ ದಶಕಗಳಿಂದ 700ಕ್ಕೂ ಹೆಚ್ಚಿನ ಸಿನೆಮಾಗಳಲ್ಲಿ ನಟಿಸಿರುವ, ಹತ್ತು ಭಾಷೆಗಳ ಸಿನೆಮಾಗಳಲ್ಲಿ ಮಿಂಚಿರುವ ಸುಮನ್ ತಲ್ವಾರ್ ಅವರಿಗೆ ‘ನಮ್ಮಕುಡ್ಲ ಪ್ರಶಸ್ತಿ’ ನೀಡಲಾಗುವುದು.
ಅಬುದಾಬಿಯಲ್ಲಿ ಕರ್ನಾಟಕ ಅಸೋಸಿಯೇಷನ್, ಬಂಟ್ಸ್ ಅಸೋಸಿಯೇಷನ್, ತುಳುಕೂಟ, ತುಳುವೆರ್ ಕೂಟ ಮೊದಲಾದ ಸಂಘಟನೆಗಳನ್ನು ಕಟ್ಟಿ ಬೆಳೆಸಿ ಸಾಂಸ್ಕೃತಿಕ, ಧಾರ್ಮಿಕ, ಕ್ರೀಡೆ, ಶಿಕ್ಷಣ, ಸಮಾಜ ಸೇವೆಗಳಲ್ಲಿ ಮುಂಚೂಣಿಯ ನಾಯಕರಾಗಿರುವ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುದಾಬಿ ಅವರಿಗೆ ‘ನಮ್ಮ ತುಳುವೆರ್‌ಪ್ರಶಸ್ತಿ’ ನೀಡಲಾಗುವುದು.
ತುಳುನಾಡಿನ ಸಂಘ ಸಂಸ್ಥೆಗಳಿಗೆ ಅವುಗಳ ಮಹತ್ತರವಾದ ಸೇವೆಯನ್ನು ಗುರುತಿಸಿ ಬಿ.ಪಿ. ಕರ್ಕೇರಾ ಸೇವಾ ಪ್ರಶಸ್ತಿಯನ್ನು ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಇವರಿಗೆ ಪ್ರದಾನ ಮಾಡಲಾಗುವುದು.
ನಿವೃತ್ತಿಯ ನಂತರ ಪತಿ ಹಾಗೂ ಮಕ್ಕಳೊಂದಿಗೆ ಪ್ರತೀ ವರ್ಷ 8 ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯ ನೀಡಿ ವಿದ್ಯಾಪೋಷಣಾ ಸೇವೆಗೈಯ್ಯುತ್ತಿರುವ ಶಶಿಲೇಖಾ ಬಾಲಕೃಷ್ಣ ಇವರಿಗೆ ಲಕ್ಷ್ಮೀ ಕರ್ಕೇರ ಸೇವಾ ಪ್ರಶಸ್ತಿ ನೀಡಲಾಗುವುದು.
ಮಂಗಳೂರು ದಸರಾ ಮೆರವಣಿಗೆಯಲ್ಲಿ ವೀಣಾಪಾಣಿ ಶಾರದೆಯ ದೃಶ್ಯರೂಪದಲ್ಲಿ ನಿರಂತರ ಹತ್ತು ಘಂಟೆಗಳ ಕಾಲ ಕಂಗೊಳಿಸಿ, ಲಕ್ಷಾಂತರ ಜನರಿಂದ ಮೆಚ್ಚುಗೆ ಗಳಿಸಿರುವ ನಾಲ್ಕು ವರ್ಷದ ಅಪೂರ್ವ ಬಾಲ ಪ್ರತಿಭೆ ಸುರತ್ಕಲ್‌ನ ತ್ರಿಷ್ಣಾ ನವೀನ್ ಅವರನ್ನು ಬಾಲ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದವರು ವಿವರಿಸಿದರು.
ನಮ್ಮ ಕುಡ್ಲ ವಾಹಿನಿಯ ನಿರ್ದೇಶಕರಾದ ಸುರೇಶ್ ಬಿ.ಕರ್ಕೇರಾ, ಲೀಲಾಕ್ಷ ಕರ್ಕೇರಾ, ಸಂತೋಷ್ ಬಿ.ಕರ್ಕೇರಾ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸುದರ್ಶನ್, ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲ್ ಉಪಸ್ಥಿತರಿದ್ದರು.