ಸಚಿವ ಸ್ಥಾನ ನೀಡುವಂತೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮನವಿ

web 6
Published on

ಮೂಡಿಗೆರೆ: ಬಿಜೆಪಿಯಿಂದ 3 ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಮತ್ತು ಆರ್​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಶನಿವಾರ ಪ್ರತ್ಯೇಕವಾಗಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ 1 ಕೋಟಿಗೂ ಅಧಿಕ ದಲಿತ ವರ್ಗದ ಜನಸಂಖ್ಯೆಯಿದೆ. ಬಲಗೈ ಪಂಗಡದಲ್ಲಿ ನಾನು ಸೇರಿದಂತೆ ಮೂವರು ಶಾಸಕರು, ಇಬ್ಬರು ಸಂಸದರಿದ್ದೇವೆ. ಮೊದಲ ಬಾರಿಗೆ ಜಯಗಳಿಸಿದ ಹಲವು ಶಾಸಕರಿಗೆ ಮಂತ್ರಿಸ್ಥಾನ ನೀಡಲಾಗಿದೆ. 3 ಬಾರಿ ಶಾಸಕನಾಗಿರುವ ನನ್ನನ್ನು ಕಡೆಗಣಿಸಿರುವುದು ಸರಿಯಲ್ಲ. ಸಿ.ಟಿ.ರವಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜಿಲ್ಲೆಯಲ್ಲಿ ಸಚಿವರಿಲ್ಲದೆ ಅಭಿವೃದ್ಧಿ ಕಾರ್ಯ ಕಷ್ಟಕರವಾಗಿದೆ. ಜಿಲ್ಲೆಯ 5 ಮಂದಿ ಶಾಸಕರ ಪೈಕಿ ನಾಲ್ವರು ಬಿಜೆಪಿಯವರು. ಅವರಲ್ಲಿ ನನಗೆ ಹಿರಿತನವಿದೆ. ಈ ಬಾರಿ ನನಗೆ ಸಚಿವ ಸ್ಥಾನ ನೀಡಬೇಕು ಎಂದು ಎಂ.ಪಿ.ಕುಮಾರಸ್ವಾಮಿ ಒತ್ತಾಯಿಸಿದರು.

ನಳಿನ್​ಕುಮಾರ್ ಕಟೀಲ್ ಮತ್ತು ಆರ್​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ಬಿಜೆಪಿ ಭದ್ರಕೋಟೆಯಾಗಿರುವ ಚಿಕ್ಕಮಗಳೂರು ಜಿಲ್ಲೆಗೆ ಸಚಿವ ಸ್ಥಾನ ಕೇಳುವುದರಲ್ಲಿ ನ್ಯಾಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ರ್ಚಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net