ಪತ್ನಿಯಿಂದಲೇ ಪತಿಯ ಕೊಲೆಶವ ಪರೀಕ್ಷೆಯಿಂದ ಬಯಲಿಗೆ ಬಂದ ಪ್ರಕರಣ

Vector illustration in HD very easy to make edits.
Published on

ಮಂಗಳೂರು: ಕೂಲಿ ಕಾರ್ಮಿಕನೋರ್ವನನ್ನು ಆತನ ಪತ್ನಿಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಗರದ ನಂತೂರು ಬಳಿ ಸಂಭವಿಸಿದೆ.


ನಂತೂರು ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂಲತಃ ಗದಗ ಜಿಲ್ಲೆಯ ಇಟಗಿ ಗ್ರಾಮದ ನಿವಾಸಿ ಹನುಮಂತಪ್ಪ (39) ಕೊಲೆಯಾದವರು. ಈತನ ಪತ್ನಿ ಗೀತಾ(34) ಆರೋಪಿತೆಯಾಗಿದ್ದು ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ.


ಹನುಮಂತಪ್ಪ ವಿಪರೀತ ಕುಡಿದು ಬಂದು ಪ್ರತಿದಿನ ಗಲಾಟೆ ಮಾಡುತ್ತಿದ್ದ. ಪತ್ನಿಗೂ ಹೊಡೆಯುತ್ತಿದ್ದ. ಜ.10ರ ರಾತ್ರಿ ವಿಪರೀತ ಕುಡಿದು ಬಂದಿದ್ದ ಹನುಮಂತಪ್ಪ ಅಂದು ಕೂಡ ಪತ್ನಿಯೊಂದಿಗೆ ಗಲಾಟೆ ಮಾಡಿದ್ದ. ಪತ್ನಿ, ಮಕ್ಕಳೊಂದಿಗೆ ಊಟ ಮಾಡಿ ಮಲಗಿದ್ದ. ಅನಂತರ ಮತ್ತೆ ಪತಿ ಪತ್ನಿಯ ನಡುವೆ ಗಲಾಟೆ ನಡೆದಿದೆ. ಈ ವೇಳೆ ಪತ್ನಿ ಗೀತಾ ಹನುಮಂತಪ್ಪನ ಕುತ್ತಿಗೆ ಬಿಗಿ ಹಿಡಿದು ಬಳಿಕ ಪಂಚೆಯಿಂದ ಬಿಗಿದು ಹತ್ಯೆ ಮಾಡಿದ್ದಾಳೆ. ಪತಿಯ ಹಿಂಸೆ ತಾಳಲಾರದೆ ಹತ್ಯೆ ಮಾಡಿರುವುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಹನುಮಂತ ಪೂಜಾರಿ ವಿಪರೀತ ಕುಡಿತದಿಂದ ಅಥವಾ ಯಾವುದೋ ಕಾಯಿಲೆಯಿಂದ ಮೃತಪಟ್ಟಿದ್ದ ಎಂಬುದಾಗಿ ಗೀತಾ ಪೊಲೀಸರಿಗೆ ದೂರು ನೀಡಿದ್ದಳು. ವಿಪರೀತ ಕುಡಿದು ಬಂದಿದ್ದ ಹನುಮಂತಪ್ಪ ತಡರಾತ್ರಿ 2 ಗಂಟೆಗೆ ನೋಡುವಾಗ ಪಕ್ಕದಲ್ಲಿ ಇರಲಿಲ್ಲ. ಹೊರಗಡೆ ನೋಡಿದಾಗ ಗೇಟಿನ ಬಳಿ ವಾಂತಿ ಮಾಡಿಕೊಂಡು ಮಾತನಾಡದ ಸ್ಥಿತಿಯಲ್ಲಿದ್ದ. ಅಣ್ಣನಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಆತ ಬಂದ ಮೇಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ. ಆದರೆ ಪತಿ ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ವಿಪರೀತ ಮದ್ಯ ಸೇವನೆ ಅಥವಾ ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂದು ಗೀತಾ ದೂರಿನಲ್ಲಿ ತಿಳಿಸಿದ್ದಳು.


ಪೊಲೀಸರು ಹನುಮಂತಪ್ಪ ಪೂಜಾರಿಯ ಶವಪರೀಕ್ಷೆಯನ್ನು ಮಾಡಿಸಿದ್ದರು. ಯಾರೋ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಶವ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿತ್ತು. ಪತ್ನಿ ಗೀತಾಳನ್ನು ವಿಚಾರಣೆಗೊಳಪಡಿಸಿದಾಗ ಆಕೆಯೇ ಹನುಮಂತಪ್ಪನನ್ನು ಕೊಲೆ ಮಾಡಿರುವುದು ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net