

ಮಂಗಳೂರು: ತೋಟಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಹಿಂಬದಿಯ ಸಮುದ್ರ ಕಿನಾರೆಯ ಬಳಿ ಸೆ.21ರಂದು ನಡೆದ ಬಾಗಲಕೋಟೆ ಮೂಲದ ಮುತ್ತು ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ (39) ಎಂಬವರ ಕೊಲೆ ಪ್ರಕರಣದ ಆರೋಪಿಯನ್ನು ಪಣಂಬೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ತೋಟಬೆಂಗ್ರೆ ನಿವಾಸಿ ಧರ್ಮರಾಜ್ ಸುವರ್ಣ(50) ಬಂಧಿತ ಆರೋಪಿ. ಈತನನ್ನು ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಚೊಂಪಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯು ಮೀನುಗಾರಿಕಾ ಕೆಲಸ ಮಾಡಿಕೊಂಡಿದ್ದ.
ಮೊಬೈಲ್ ಹಾಳು ಮಾಡಿದ್ದು ಕಾರಣ
ಆರೋಪಿ ಧರ್ಮರಾಜ್ ಸುವರ್ಣ ಮತ್ತು ಮೃತ ಮುತ್ತು ಬಸವರಾಜ ವಡ್ಡರ್ ಮುದುಕಪ್ಪ ಕಳೆದ ಕೆಲವು ಸಮಯದಿಂದ ಒಬ್ಬರಿಗೊಬ್ಬರು ಪರಿಚಯದವರಾಗಿದ್ದರು. ಇತ್ತೀಚೆಗೆ ಆರೋಪಿ ಧರ್ಮರಾಜ್ ಸುವರ್ಣ ಹೊಸ ಮೊಬೈಲ್ ಖರೀದಿಸಿದ್ದು, ಆ ಮೊಬೈಲ್‌ನ್ನು ಕೊಲೆಯಾದ ಮುತ್ತು ಬಸವಾರಾಜ್ ತೆಗೆದುಕೊಂಡು ವಾಪಾಸ್ ನೀಡದೆ ಮೊಬೈಲ್ ಹಾಳು ಮಾಡಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿ ಮುತ್ತು ಬಸವರಾಜ ವಡ್ಡರ್ ಯಾನೆ ಮುದುಕಪ್ಪನನ್ನು ಮರದ ಸೋಂಟೆಯಿಂದ ಹೊಡೆದು ಕೊಲೆ ಮಾಡಿದ್ದ. ಹನುಮಂತ ದುರುಗಪ್ಪ ವಡ್ಡರ್ ಎಂಬವರು ನೀಡಿದ ದೂರಿನಲ್ಲಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮೊಹಮ್ಮದ್ ಸಲೀಂ ಅಬ್ಬಾಸ್, ಪಣಂಬೂರು ಪೊಲೀಸ್ ಠಾಣಾ ಕಾನೂನು ಸುವ್ಯವಸ್ಥೆ ವಿಭಾಗದ ಉಪ ನಿರೀಕ್ಷಕಿ ಶ್ರೀಕಲಾ ಕೆ.ಟಿ, ಜ್ಞಾನಶೇಖರ ಹಾಗೂ ಎ.ಎಸ್.ಐ.ಗಳಾದ ಕೃಷ್ಣ, ಬಿ.ಕೆ. ನಯನಾ ಹಾಗೂ
ಸಿಬ್ಬಂದಿಗಳಾದ ಸತೀಶ್, ಸಯ್ಯದ್ ಇಮ್ತಿಯಾಜ್, ಪ್ರೇಮಾನಂದ, ನವೀನ್ ಚಂದ್ರ, ಜೇಮ್ಸ್, ಶಶಿಕುಮಾರ್, ರಾಕೇಶ್, ಮಾಣಿಕ್, ಸೋಮಾ ನಾಯ್ಕ, ಚಾಲಕ ಅಂಬಣ್ಣ ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.