

ಮಂಗಳೂರು: ಡಿಜಿಟಲ್ ಯುಗದಲ್ಲಿ ಯುವ ಪೀಳಿಗೆಯು ವಿದ್ಯುನ್ಮಾನ ಉಪಕರಣಗಳ ಅತಿಯಾದ ಬಳಕೆಯಿಂದ ಧರ್ಮ, ಸಂಸ್ಕೃತಿ,ಸಂಸ್ಕಾರ ಆಚರಣೆ ಮರೆಯುತ್ತಿದ್ದು, ಹಿಂದೂ ಧರ್ಮದ ಸಮಸ್ತ ಆಚರಣೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಿ ಅವರನ್ನು ಜಾಗೃತಗೊಳಿಸುವ ಸವಾಲು ನಮ್ಮ ನಾಗರಿಕ ಸಮಾಜದ ಮೇಲಿದೆ ಎಂದು ಹಿಂದೂ ಯುವಸೇನೆ ಓಂ ಸಾಯಿ ಶಾಖೆ ಕಾವೂರು ಇದರ ಮಾಜಿ ಅಧ್ಯಕ್ಷರಾದ ಸುಜಿತ್ ಹೇಳಿದರು.
ಅವರು ಮುಲ್ಲಕಾಡಿನ ವಿಠ್ಠಲ ರುಕುಮಾಯಿ ಭಜನಾ ಮಂದಿರ ಮತ್ತು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಶಾಖೆಯ ಜಂಟಿ ಆಶ್ರಯದಲ್ಲಿ ನಡೆಯುವ ಕಾವೂರು ಪ್ರಖಂಡದ ಐದನೇ ಬಾಲ ಸಂಸ್ಕಾರ ಕೇಂದ್ರದ ಉದ್ಘಾಟನೆ ನೇರವೇರಿಸಿ ಮಾತನಾಡಿದರು.
ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿಯ ಉಪಾಧ್ಯಕ್ಷ ಕೊರಗಪ್ಪ ಶೆಟ್ಟಿ ಮಾತನಾಡಿ, ಬಾಲ್ಯದಲ್ಲಿ ರೂಢಿಸಿಕೊಂಡ ಮೌಲ್ಯಗಳು ಮುಂದೆ ಸದ್ಗುಣಶೀಲ ಜೀವನವನ್ನು ರೂಪಿಸುವ ತಳಹದಿಯಾಗಿದೆ ಎಂದರು.
ವಿಠ್ಠಲ ರುಕುಮಾಯಿ ಭಜನಾ ಮಂದಿರದ ಅಧ್ಯಕ್ಷ ತಿಮ್ಮಪ್ಪ ಯು. ಮಾತನಾಡಿ, ಬಾಲ ಸಂಸ್ಕಾರದಲ್ಲಿ ಪ್ರತಿ ಭಾನುವಾರ ಬೆಳಗ್ಗೆ ಮಕ್ಕಳಿಗೆ ಸಮಯ ಪಾಲನೆಯ ಜೊತೆಗೆ ಶ್ಲೋಕ,ಭಜನೆ,ಧ್ಯಾನ,ನೀತಿ ಕಥೆ,ದೇಶೀಯ ಆಟಗಳ ಮೂಲಕ ಧಾರ್ಮಿಕ ಆಸಕ್ತಿಗಳ ಕಡೆಗೆ ಒಲವನ್ನು ಬೆಳೆಸುವ ಪ್ರಯತ್ನ ನಡೆಸಲಾಗುವುದು ಎಂದರು.
ಬಾಲ ಸಂಸ್ಕಾರ ಕೇಂದ್ರ ಕಾವೂರು ಪ್ರಭಾರಿ ಚೈತನ್ಯ ಮಾತನಾಡಿ ಈಗಾಗಲೇ ಕಾವೂರು ಪ್ರಖಂಡದ ವ್ಯಾಪ್ತಿಯಲ್ಲಿ ಕೊಂಚಾಡಿ, ಜ್ಯೋತಿನಗರ, ಪಳನೀರು, ಶಾಂತಿ ನಗರದಲ್ಲಿ ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ 300 ಕ್ಕೂ ಹೆಚ್ಚು ಮಕ್ಕಳು ಧರ್ಮ ಶಿಕ್ಷಣ ಕಲಿಯುತ್ತಿದ್ದಾರೆ. ಮುಲ್ಲಕಾಡು ಶಾಖೆಯಲ್ಲೂ ಈಗಾಗಲೆ 40 ಹೆಚ್ಚಿನ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳಲು ಆಸಕ್ತಿ ವಹಿಸಿದ್ದಾರೆ ಎಂದರು.
ಕಾವೂರು ಪ್ರಖಂಡ ಬಜರಂಗ ದಳದ ಸಂಯೋಜಕ ವಿಜಯ್, ಸಂಯೋಜಕಿ ಚೇತನಾ, ಮಂದಿರದ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿಗಾರ್, ಊರ್ವ ಬಾಲ ಸಂಸ್ಕಾರ ಕೇಂದ್ರದ ಅರವಿಂದ್ ಸೀತಾನದಿ ಮತ್ತಿತರರು ಉಪಸ್ಥಿತರಿದ್ದರು.
ಶಾಂತಿ ನಗರ ಬಾಲ ಸಂಸ್ಕಾರ ಕೇಂದ್ರದ ಶಿಬಿರಾರ್ಥಿಗಳು ಐಕ್ಯ ಮಂತ್ರ, ಹನುಮಾನ್ ಚಾಲೀಸ ಪಠಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪರಿಸರದ ಹಿರಿಯ ವ್ಯಕ್ತಿ ದೇವೇಂದ್ರ ಅಮೀನ್ ಮುಲ್ಲಕಾಡು ಅನಿಸಿಕೆ ವ್ಯಕ್ತಪಡಿಸಿದರು. ಲೋಕೇಶ್ ನಿರೂಪಿಸಿದರು. ಪ್ರವೀಣ್ ಶೆಟ್ಟಿಗಾರ್ ವಂದಿಸಿದರು.