

ಮಂಗಳೂರು: ಮಕ್ಕಳ ಸಾಧನೆಯನ್ನು ಪ್ರಶಂಸಿಸಿ, ಎದುರಾಗುವ ಸೋಲನ್ನು ಸ್ವೀಕರಿಸಲು ಕಲಿಸಿ ಎಂದು ರೋಶನಿ ನಿಲಯದ ಕೌನ್ಸೆಲಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರೋಸಾ ನಿಮ್ಮಿ ಮ್ಯಾಥ್ಯೂ ಹೇಳಿದರು.
ಬುಧವಾರ ನಡೆದ ಮೇರಿಹಿಲ್ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನ ಯುಕೆಜಿ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮಕ್ಕಳು ಮಲಗುವ ಮೊದಲು ಯಾವಾಗಲೂ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂಬ ಸರಳ ಆದರೆ ಶಕ್ತಿಯುತ ಪದಗಳೊಂದಿಗೆ ಪ್ರೀತಿಯನ್ನು ವ್ಯಕ್ತಪಡಿಸಿ ಎಂದರು.
ಪ್ರಾಂಶುಪಾಲೆ ಭಗಿನಿ ಮೆಲಿಸ್ಸಾ, ಆಡಳಿತಾಧಿಕಾರಿ ಭಗಿನಿ ಕರಿಸ್ಸಿಮಾ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಪ್ರೀಮಾ ಡಿಕುನ್ಹಾ ಉಪಸ್ಥಿತರಿದ್ದರು.
ಯುಕೆಜಿ ಪದವೀಧರರನ್ನು ಶಾಲಾ ಬ್ಯಾಂಡ್‌ನೊಂದಿಗೆ ಸಭಾಂಗಣಕ್ಕೆ ಕರೆದೊಯ್ಯಲಾಯಿತು. ನರ್ಸರಿ ಮತ್ತು ಎಲ್‌ಕೆಜಿ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಕಾರ್ಯಕ್ರಮ ಜರುಗಿತು.
ನಂತರ ಪ್ರತಿಯೊಬ್ಬ ಯುಕೆಜಿ ವಿದ್ಯಾರ್ಥಿಯು ತಮ್ಮ ಪೋಷಕರೊಂದಿಗೆ ವೇದಿಕೆಗೆ ಆಗಮಿಸಿ ಮುಖ್ಯ ಅತಿಥಿಗಳಿಂದ ತಮ್ಮ ಪದವಿ ಪ್ರಮಾಣಪತ್ರ ಸ್ವೀಕರಿಸಿದರು.