

ಮಂಗಳೂರು : ನಗರದ ಕೊಟ್ಟಾರದಲ್ಲಿ ಆಟೋ ಓಡಿಸುತ್ತಿದ್ದ ಮೂಲ್ಕಿ ಕೊಳ್ಳಾಡು ನಿವಾಸಿ ಮಹಮ್ಮದ್ ಶರೀಫ್ ಎಂಬವರ ಮೃತದೇಹ ಕೇರಳ ಗಡಿಭಾಗದ ಕುಂಜತ್ತೂರು ಪದವು ಎಂಬಲ್ಲಿ ನಿರ್ಜನ ಪ್ರದೇಶದ ಬಾವಿಯಲ್ಲಿ ಪತ್ತೆಯಾಗಿದೆ. ಬಾವಿಯಿಂದ ನೂರು ಮೀಟರ್ ದೂರದಲ್ಲಿ ಆಟೋ ಪತ್ತೆಯಾಗಿದ್ದು ಸ್ಥಳದಲ್ಲಿ ಚಪ್ಪಲಿಯೂ ಸಿಕ್ಕಿದೆ. ಕೊಲೆ ಶಂಕೆ ವ್ಯಕ್ತವಾಗಿದೆ.
ಬುಧವಾರ ಬೆಳಗ್ಗೆ ಎಂದಿನಂತೆ ಮನೆಯಿಂದ ಆಟೋದಲ್ಲಿ ತೆರಳಿದ್ದ ಅವರು, ಮುಲ್ಕಿಯ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಪತ್ನಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಬಂದಿದ್ದರಿಂದ ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಯುತ್ತಿದ್ದಂತೆ ಗುರುವಾರ ಸಂಜೆ ಕೇರಳ- ಕರ್ನಾಟಕ ಗಡಿಭಾಗದ ತಲಪಾಡಿ ಬಳಿಯ ಕುಂಜತ್ತೂರು ಪದವು ಎಂಬಲ್ಲಿ ಆಟೋ ರಿಕ್ಷಾ ಕಂಡು ಬಂದಿದ್ದು ಹತ್ತಿರದ ಬಾವಿಯಲ್ಲಿ ಶವ ಪತ್ತೆಯಾಗಿದೆ.
ಮುಹಮ್ಮದ್ ಶರೀಫ್ ದಿನಾ ಬೆಳಗ್ಗೆ 10 ಗಂಟೆಗೆ ತನ್ನ ಮನೆಯಿಂದ ಕೊಟ್ಟಾರ ಚೌಕಿಗೆ ಬಂದು ಬಾಡಿಗೆ ಮಾಡುತ್ತಿದ್ದರು. ಕೆಲವೊಮ್ಮೆ ತಡ ರಾತ್ರಿಯಾದರೂ ಮನೆಗೆ ಹೋಗುತ್ತಿದ್ದರು. ಆದರೆ ಬುಧವಾರ ಬೆಳಗ್ಗೆ ಮನೆಯಿಂದ ಹೊರಟು ಬಂದಿದ್ದ ಅವರು ಮನೆಗೆ ಮರಳಿರಲಿಲ್ಲ. ಅವರಿಗೆ ಮೂವರು ಗಂಡು ಮಕ್ಕಳಿದ್ದು ದೊಡ್ಡವರಾಗಿದ್ದಾರೆ. ಯಾವುದೇ ದುಶ್ಚಟ ಇರಲಿಲ್ಲ. ಆಟೋವನ್ನು ಬಾಡಿಗೆ ಉದ್ದೇಶಕ್ಕಾಗಿ ಅಲ್ಲಿಗೆ ಹೋಗಿರುವ ಸಾಧ್ಯತೆ ಇಲ್ಲ ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.
ಕುಂಜತ್ತೂರು ಗಡಿಭಾಗ ಡ್ರಗ್ಸ್ ಇಸ್ಪೀಟ್ ಆಟದ ಅಡ್ಡೆಯಾಗಿದ್ದು ನಿರ್ಜನ ಪ್ರದೇಶವಾಗಿದೆ. ಡ್ರಗ್ಸ್ ಅಥವಾ ಇಸ್ಪೀಟ್ ಆಟದವರು ಬಾಡಿಗೆ ಕರೆತಂದಿದ್ದಾರೆಯೇ, ಅಲ್ಲಿ ಗಲಾಟೆ ನಡೆದು ಇವರನ್ನು ಕೊಲೆ ಮಾಡಿದ್ದಾರೆಯೇ ಎನ್ನುವ ಶಂಕೆಯಿದೆ. ಸ್ಥಳಕ್ಕೆ ಬಂದ ಮಹಮ್ಮದ್ ಶರೀಫ್ ಅವರ ಪುತ್ರ ಆಟೋದಲ್ಲಿ ಕೀ ಇಲ್ಲ. ಪೊದೆಗಳ ನಡುವೆ ನೇರವಾಗಿಯೇ ಆಟೋ ನಿಂತಿದೆ. ಅಲ್ಲಿಂದ ನೂರು ಮೀಟರ್ ದೂರದ ಬಾವಿಯಲ್ಲಿ ಶವ ಪತ್ತೆಯಾಗಿದೆ. ಸಂಶಯ ಕಾಣುತ್ತಿದ್ದು ಕೊಲೆಯಾಗಿರುವ ಶಂಕೆ ತೋರುತ್ತಿದೆ ಎಂದು ತಿಳಿಸಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇಹದಲ್ಲಿ ಇರಿತದ ಗಾಯ: ಮಹಮ್ಮದ್ ಶರೀಫ್ ಅವರ ಮೃತದೇಹವನ್ನು ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡ ಶುಕ್ರವಾರ ಬೆಳಗ್ಗೆ ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಮೃತ ಶರೀರದಲ್ಲಿ ಹಲವು ಇರಿತದ ಗಾಯಗಳು ಕಂಡು ಬಂದಿದೆ. ಬಾವಿಯ ಬಳಿ ರಕ್ತದ ಕಲೆಗಳು ಪತ್ತೆಯಾಗಿವೆ. ಬಳಿಕ ಪರಿಯಾರಂ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶ್ವಾನದಳ, ಫಾರೆನ್ಸಿಕ್ ತಜ್ಞರು ಹಾಗೂ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.