ತಿಂಗಳಾಂತ್ಯಕ್ಕೆ ಕೆತ್ತಿಕಲ್ ಗುಡ್ಡ ತನಿಖಾ ವರದಿ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ

Dinesh gundoo rao
Published on

ಮಂಗಳೂರು: ವಾಮಂಜೂರು ಬಳಿಯ ಕೆತ್ತಿಕಲ್ ಗುಡ್ಡದಲ್ಲಿ ಅವ್ಯಾಹತವಾಗಿ ಮಣ್ಣು ತೆಗೆದ ಕಾರಣ ಉಂಟಾಗಿರುವ ಅಪಾಯದ ಪರಿಸ್ಥಿತಿ ಕುರಿತಂತೆ ಸೆಂಟ್ರಲ್ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ತಿಂಗಳಾಂತ್ಯಕ್ಕೆ ವರದಿ ಸಿಗಲಿದೆ. ವರದಿ ಆಧಾರದಲ್ಲಿ ಶಿಸ್ತು ಕ್ರಮ ವಹಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.


ಸ್ವಾತಂತ್ರೃ ದಿನಾಚರಣೆ ಅಂಗವಾಗಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಗುರುವಾರ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.


2018-19ರಿಂದಲೇ ಅಲ್ಲಿಂದ ಮಣ್ಣು ತೆಗೆದಿರುವ ಬಗ್ಗೆ ವರದಿ ಇದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳವರು ಏನು ಮಾಡಿದ್ದಾರೆ ಎಂಬ ಬಗ್ಗೆ ತನಿಖಾ ತಂಡವು ನೀಡುವ ವರದಿ ಆಧಾರದಲ್ಲಿ ಕ್ರಮ ವಹಿಸಲಾಗುವುದು. ಇದೇ ವೇಳೆ ಅಲ್ಲಿರುವ 9 ಮನೆಗಳ ಸದಸ್ಯರನ್ನು ಸ್ಥಳಾಂತರ ಮಾಡಿ ರಕ್ಷಣೆ ಒದಗಿಸಬೇಕಾಗಿದೆ ಎಂದು ಸಚಿವ ದಿನೇಶ್ ಗುಂಡುರಾವ್ ಹೇಳಿದರು.


ಕೆತ್ತಿಕಲ್ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ತಂಡ ಬಂದು ಪರಿಶೀಲನೆ ನಡೆಸಿದೆ. ಅವರು ನೀಡಿರುವ ಸಲಹೆಗಳನ್ನು ಪಾಲಿಸಲು ಜಿಲ್ಲಾಡಳಿತ ಕ್ರಮ ವಹಿಸಲಿದೆ. ಎನ್‌ಐಟಿಕೆ ತಂಡವೂ ಪರಿಶೀಲನೆ ನಡೆಸಿದ್ದು, ವರದಿ ನೀಡಲಿದೆ. ಎನ್‌ಎಚ್‌ಎಐ ವತಿಯಿಂದಲೂ ಪರಿಶೀಲನೆ ನಡೆದಿದೆ ಎಂದು ಸಚಿವರು ಹೇಳಿದರು.


ಪೊಲೀಸ್ ಕ್ವಾಟರ್ಸ್ ಹೊಸ ಕಟ್ಟಡಗಳ ಕಳಪೆ ಕಾಮಗಾರಿ ಬಗ್ಗೆ ವರದಿ ನೀಡಲು ತಿಳಿಸಲಾಗಿದೆ. ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿ ಕಾಮಗಾರಿ ಪೂರ್ಣಗೊಳಿಸಲು ಸ್ಮಾರ್ಟ್ ಸಿಟಿಯಡಿ 20 ಕೋಟಿ ರೂ. ಮಂಜೂರು ಆಗಿದೆ. ಶೀಘ್ರವೇ ಕೆಲಸ ಮುಗಿಸಿ ಉದ್ಘಾಟನೆ ನಡೆಸಲಾಗುವುದು ಎಂದು ಸಚಿವರು ಈ ಸಂದರ್ಭ ತಿಳಿಸಿದರು.
ಈ ವರ್ಷ ಪ್ರಥಮ ಬಾರಿಗೆ ಎಲ್ಲಾ ಜಿಲ್ಲೆಗಳಲ್ಲಿ ಅಂಗಾಂಗ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸುವ ಕಾರ್ಯ ಇಂದಿನಿಂದ ಆರಂಭಗೊಂಡಿದೆ. ಬೇಡಿಕೆ ಅಗತ್ಯವಿದ್ದರೂ ಅಂಗಾಂಗ ಸಿಗುವುದು ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net