

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಸುರಿದ ಭಾರೀ ಮಳೆಯಿಂದ ಮಂಗಳೂರು ನಗರ ದಕ್ಷಿಣ ಕ್ಷೇತ್ರವೂ ಸೇರಿದಂತೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಜಿಲ್ಲೆಯ ಜನತೆ ಮತ್ತೆ ಬದುಕು ಕಟ್ಟಿಕೊಳ್ಳಲು 300 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಶಾಸಕ ವೇದವ್ಯಾಸ್ ಕಾಮತ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹಲವಾರು ಮನೆಗಳು ಕುಸಿದಿವೆ. ಮನೆಗಳ ಮೇಲೆ ಬೃಹತ್ ಮರ ಉರುಳಿ ಹಾನಿ ಸಂಭವಿಸಿದೆ. ಮನೆಯೊಳಗೆ ಪ್ರವಾಹದ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ. ಗುಡ್ಡ ಕುಸಿತ, ರಸ್ತೆ, ಚರಂಡಿ, ತಡೆಗೋಡೆ, ರಾಜ ಕಾಲುವೆಗಳಿಗೆ ಹಾನಿ, ಹೀಗೆ ಹತ್ತು ಹಲವು ರೀತಿಯಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ.
ಪ್ರಾಕೃತಿಕ ವಿಕೋಪದಲ್ಲಿ ಪೂರ್ಣ ಮನೆ ಹಾನಿಯಾಗಿದ್ದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಯಮದ ಪ್ರಕಾರ 1.20 ಲಕ್ಷ ರೂ., ಭಾಗಶಃ ಮನೆ ಹಾನಿಗೆ 50,000 ಮಾತ್ರ ಪರಿಹಾರ ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ. ಮನೆಯೊಳಗೆ ಪ್ರವಾಹದ ನೀರು ನುಗ್ಗಿದರೆ ಯಾವುದೇ ಪರಿಹಾರದ ಬಗ್ಗೆ ಉಲ್ಲೇಖಿಸಿಲ್ಲ. ಉಸ್ತುವಾರಿ ಸಚಿವರು ಹೆಚ್ಚಿನ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಆ ಹೆಚ್ಚಿನ ಪರಿಹಾರ ಘೋಷಣೆಯಾಗುವುದು ಯಾವಾಗ? ಸಂತ್ರಸ್ತರಿಗೆ ತಲುಪುವುದು ಯಾವಾಗ? ಎಂಬುದೇ ದೊಡ್ಡ ಪ್ರಶ್ನೆ ಎಂದರು.
ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ, ಸಚಿವ ಸಂಪುಟವೇ ರಚನೆಯಾಗದಂತಹ ಸಂದರ್ಭದಲ್ಲಿ ಪ್ರಕೃತಿ ವಿಕೋಪ ಉಂಟಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಇಡೀ ರಾಜ್ಯವನ್ನು ಸುತ್ತಿ ಸಮೀಕ್ಷೆ ನಡೆಸಿ ಪೂರ್ಣ ಮನೆ ಹಾನಿಯಾಗಿದ್ದರೆ 5 ಲಕ್ಷ ರೂ., ಭಾಗಶಃ ಮನೆಗೆ ಹಾನಿಯಾಗಿದ್ದರೆ 2.50 ಲಕ್ಷ ರೂ. ನೀಡಿದ್ದರು. ಆರ್. ಅಶೋಕ್ ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲಿ ಮಳೆ ಹಾನಿಯಿಂದಾದ ನಷ್ಟಕ್ಕೆ ಕೇಂದ್ರ ಸರ್ಕಾರದ ನೆರವಿಗೆ ಕಾಯದೇ ರಾಜ್ಯ ಸರ್ಕಾರದ ವತಿಯಿಂದಲೇ ಪರಿಹಾರ ನೀಡುವಂತೆ ಕ್ರಮ ಕೈಗೊಳ್ಳಲಾಗಿತ್ತು. ಪ್ರಕೃತಿ ವಿಕೋಪ ಸಂದರ್ಭದಲ್ಲಿ ದನ-ಕರು-ಕುರಿ ಸಹಿತ ಸಾಕುಪ್ರಾಣಿಗಳು ಮೃತಪಟ್ಟಲ್ಲಿ ಎನ್‌ಡಿಆರ್‌ಎಫ್ ವತಿಯಿಂದ ನೀಡುವ ಪರಿಹಾರದ ಜೊತೆಗೆ ನೀರು ನುಗ್ಗಿದ್ದರೆ 10,000 ರೂ. ಪರಿಹಾರ ಘೋಷಿಸಿದ್ದರು.
ಮಳೆ ಹಾನಿ ಸಂಭವಿಸಿದ್ದರೂ ಮುಖ್ಯಮಂತ್ರಿ ಅವರು ಜಿಲ್ಲೆಗೆ ಭೇಟಿ ನೀಡಿಲ್ಲ. ಮುಡಾ ಭ್ರಷ್ಟಾಚಾರದ ಹಗರಣದಲ್ಲಿ ಸಿಲುಕಿರುವ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳುವುದರಲ್ಲೇ ನಿರತರಾಗಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ಕಣ್ಣೀರಿಡುತ್ತಿರುವ ಜನರು ಸರ್ಕಾರದ ಮುಂದೆ ಪರಿಹಾರ ಹೆಚ್ಚಿಸಿ ಎಂದು ಅಂಗಲಾಚಬೇಕೆಂದು ಸರ್ಕಾರ ಬಯಸುತ್ತಿದೆಯೇ? ಇಂತಹ ಸಂದರ್ಭಗಳಲ್ಲಿ ಪರಿಹಾರ ನೀಡುವ ವಿಷಯದಲ್ಲಿಯೂ ಸರ್ಕಾರ ಹೀಗೆ ವರ್ತಿಸಿದರೆ ಜನರು ಎಲ್ಲಿಗೆ ಹೋಗಬೇಕು? ಯಾರ ಬಳಿ ಸಹಾಯ ಕೇಳಬೇಕು? ರಾಜ್ಯದಲ್ಲಿ ಎಲ್ಲದರ ಬೆಲೆ ಏರಿಸುತ್ತಾ ಜೇಬು ತುಂಬಿಸಿಕೊಳ್ಳುತ್ತಿರುವ ಸರ್ಕಾರ, ಪರಿಹಾರದ ವಿಷಯದಲ್ಲಿ ಜನಸಾಮಾನ್ಯರಿಗೆ ಅನ್ಯಾಯವೆಸಗುತ್ತಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ಲಲ್ಲೇಶ್, ರಮೇಶ್ ಹೆಗ್ಡೆ, ಮನಪಾ ಸದಸ್ಯೆ ಪೂರ್ಣಿಮಾ, ಪ್ರಮುಖರಾದ ಸಂಜಯ್ ಪ್ರಭು, ನಿತಿನ್ ಕುಮಾರ್, ರವಿಶಂಕರ್ ಮಿಜಾರ್ ಉಪಸ್ಥಿತರಿದ್ದರು.