

ಮಂಗಳೂರು: ಕಾಲೇಜಿನ ವಾರ್ಷಿಕೋತ್ಸವ ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಅವಕಾಶವಾಗುತ್ತದೆ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪಡೆದ ಅನುಭವಗಳನ್ನು, ಕಲಿತ ಶಿಸ್ತು, ಶ್ರದ್ಧೆಯನ್ನು ಜೀವನದಲ್ಲಿ ಅಳವಡಿಸಿ ಉತ್ತಮ ನಾಗರಿಕರಾಗಬೇಕೆಂದು ಬಿಎಎಸ್‌ಎಫ್ ಇಂಡಿಯಾ ಲಿಮಿಟೆಡ್‌ನ ನಿವೃತ್ತ ಸೈಟ್ ಡೈರೆಕ್ಟರ್ ಪಿ.ಪಿ. ಶೆಟ್ಟಿ ಹೇಳಿದರು.
ಗುರುವಾರ ನಡೆದ ಮ್ಯಾಪ್ಸ್ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಯೇನೆಪೊಯ ಫಾರ್ಮಸಿ ಹಾಗೂ ಆಯುರ್ವೇದ ರಿಸರ್ಚ್ ಸೆಂಟರ್ ಮುಖ್ಯಸ್ಥ ಡಾ.ಕೆ.ಆರ್. ಚಂದ್ರಶೇಖರ್ ಇನ್ನೋರ್ವ ಅತಿಥಿಯಾಗಿದ್ದರು. ಮ್ಯಾಪ್ಸ್ ಕಾಲೇಜು ಮಂಗಳೂರು ವಿ.ವಿ. ಮಟ್ಟದಲ್ಲಿ ಒಳ್ಳೆಯ ಹೆಸರು ಪಡೆದ ಶಿಕ್ಷಣ ಸಂಸ್ಥೆಯಾಗಿದೆ. ಸಿ.ಎ. ಕಲಿಕೆಯಲ್ಲಿ ಅತ್ಯುನ್ನತ ಸ್ಥಾನ ಪಡೆದಿದೆ ಎಂದರು.
ಕಾಲೇಜಿನ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವಾ ಅಧ್ಯಕ್ಷತೆ ವಹಿಸಿದ್ದರು. ಮ್ಯಾಪ್ಸ್ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಶಿಸ್ತಿಗೆ ಹೆಸರಾದವರು. ವಿದ್ಯಾರ್ಥಿಗಳು ತಮ್ಮಲ್ಲಿರುವ ಒಳ್ಳೆಯ ಪ್ರತಿಭೆಯನ್ನು, ಕಾಲೇಜಿನಲ್ಲಿ ಪಡೆದ ಅನುಭವಗಳನ್ನು ತಮ್ಮ ಉನ್ನತ ಶಿಕ್ಷಣದಲ್ಲಿ ಅಳವಡಿಸಿಕೊಂಡು ದೇಶಕ್ಕೆ ಕೀರ್ತಿ ತರಬೇಕೆಂದರು.
ಕಾಲೇಜಿನಲ್ಲಿ ತಮ್ಮ ಶೈಕ್ಷಣಿಕ ಹಾಗೂ ಪಠ್ಯೇತರ ಸಾಧನೆಗಳಿಂದ ಶ್ರೇಷ್ಠ ವಿದ್ಯಾರ್ಥಿಗಳೆಂದು ಆಯ್ಕೆಯಾದ ಮುಲ್ಕಿ ಪಡುಮನೆ ರಾಘವ ಅಚ್ಚಣ್ಣ ಶೆಟ್ಟಿ ಇವರ ಸ್ಮರಣಾರ್ಥ ಯು. ಆದಿತ್ಯ ಆರ್ ನಾಯಕ್, ಪಾವೂರುಗುತ್ತು ಕಲ್ಯಾಣಿ ಪಿ ಆಳ್ವ ಇವರ ಸ್ಮರಣಾರ್ಥ ಪ್ಲಾವಿಟಾ ಪ್ರಿಯ ಪಿಂಟೋ ಮತ್ತು ಹೆಜಮಾಡಿ ರವೀಂದ್ರನಾಥ ಶೆಣೈ ಇವರ ಸ್ಮರಣಾರ್ಥ ಸೌಂದರ್ಯ ಲಕ್ಷ್ಮಿಯವರನ್ನು ಗೌರವಿಸಲಾಯಿತು.
ತಮ್ಮ ಸೇವಾಕಾರ್ಯದಿಂದ ಅತ್ಯುತ್ತಮ ಸೇವೆ ಹಾಗೂ ಸಮರ್ಪಣೆ ಭಾವದಿಂದ ಕಾರ್ಯನಿರ್ವಹಿಸಿದ ವಿದ್ಯಾರ್ಥಿ ಎ. ಹೇಮಂತ್ ಉಡುಪ ಅವರಿಗೆ ನೀರುಮಾರ್ಗ ಹೇಮಾವತಿ ಸುವರ್ಣ ನಗದು ಬಹುಮಾನ ನೀಡಲಾಯಿತು. ವಿವಿಧ ಆಟೋಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲೆ ಶ್ರುತಿ ಶೆಟ್ಟಿ ವರದಿ ವಾಚಿಸಿದರು. ಕಾಮರ್ಸ್ ವಿಭಾಗದ ಮುಖ್ಯಸ್ಥ ಪ್ರಶಾಂತ್ ಅಲಿಸನ್, ಹಿಂದಿ ವಿಭಾಗದ ಡಾ. ಕವಿತಾ, ಬಿಎ.ಎಸ್.ಎಲ್.ಪಿ. ವಿಭಾಗದ ಮಂಜುಳಾ ಕಾಮತ್ ಹಾಗೂ ಶ್ರುತಿ ಮನೈ ಕಾಲೇಜಿನ ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು. ಬಿಸಿಎ ವಿಭಾಗದ ಮುಖ್ಯಸ್ಥೆ ಉಷಾದೇವಿ ಸ್ವಾಗತಿಸಿದರು. ಉಪನ್ಯಾಸಕ ಚೇತನ್ ಆಚಾರ್ಯ ಇವರು ಕ್ರೀಡಾ ಕ್ಷೇತ್ರದಲ್ಲಿ ಪ್ರಶಸ್ತಿ ವಿಜೇತರನ್ನು ಸಭೆಗೆ ಪರಿಚಯಿಸಿದರು. ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಭಾಕರ್ ನೀರ್‌ಮಾರ್ಗ ವಂದಿಸಿದರು. ಉಪನ್ಯಾಸಕಿ ಕ್ಷಮಾ ರಾವ್ ಕಾರ್ಯಕ್ರಮ ನಿರ್ವಹಿಸಿದರು.