ಮಂಗಳಾ ಈಜುಕೊಳದಲ್ಲಿ ಮುಳುಗಿ ಹರ್ಯಾಣ ಮೂಲದ ಯುವಕ ಮೃತ್ಯು

mng--12 Dec Abhishek Anand
Published on

ಮಂಗಳೂರು: ಇಲ್ಲಿನ ಮಂಗಳಾ ಈಜುಕೊಳದಲ್ಲಿ ಮಂಗಳವಾರ ಸಂಜೆ ಈಜಾಡುತ್ತಿದ್ದ ಹರ್ಯಾಣ ಮೂಲದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಅಭಿಷೇಕ್ ಆನಂದ್ (35) ಮೃತಪಟ್ಟ ಯುವಕ.


ಪ್ರಕರಣದ ವಿವರ: ಮಂಗಳಾ ಈಜುಕೊಳದಲ್ಲಿ ಸಂಜೆ 4.45ರಿಂದ 5.30ರ ವರೆಗೆ ಸಾರ್ವಜನಿಕರಿಗೆ ಈಜಲು ಪ್ರವೇಶಾವಕಾಶವಿದ್ದು, 4.30ರ ವೇಳೆ ಅಭಿಷೇಕ್ ಬಂದು ಟಿಕೇಟ್ ಪಡೆದುಕೊಂಡಿದ್ದಾರೆ. 4.45ರ ವೇಳೆ ಈಜುಕೊಳಕ್ಕೆ ಇಳಿದಿದ್ದು, 5.05ರ ಸುಮಾರಿಗೆ ಏಕಾಏಕಿ ನೀರಲ್ಲಿ ಮುಳುಗಿದ್ದಾನೆ. ಈ ಸಮಯದಲ್ಲಿ ಸುಮಾರು 30ಕ್ಕೂ ಅಧಿಕ ಮಂದಿ ಈಜಾಡುತ್ತಿದ್ದು, ಈತ ಮುಳುಗಿದ್ದು ಯಾರ ಅರಿವಿಗೆ ಬರಲೇ ಇಲ್ಲ. ಹುಡುಗನೊಬ್ಬ ಈಜಾಡುತ್ತಾ ಹೋಗುತ್ತಿದ್ದಾಗ ನೀರಿನ ಅಡಿಯಲ್ಲಿ ದೇಹವೊಂದು ಕಾಣಸಿಕ್ಕಿದ್ದು ಕೂಡಲೇ ಲ್ೈ ಗಾರ್ಡ್‌ಗಳಿಗೆ ಮಾಹಿತಿ ನೀಡಿದ್ದಾನೆ. ಈ ಸಂದರ್ಭ ಈಜುಕೊಳದಲ್ಲಿ ಕಾರ್ಯನಿರತರಾಗಿದ್ದ ರಾಜೇಂದ್ರ ಮತ್ತು ಪುಂಡಲೀಕ ಎಂಬ ಲ್ೈ ಗಾರ್ಡ್‌ಗಳು ಈಜುಕೊಳಕ್ಕೆ ಹಾರಿ ಆತನನ್ನು ಮೇಲಕ್ಕೆ ತಂದಿದ್ದಾರೆ. ಯುವಕನಿಗೆ ಈಜಾಡಲು ಬರುತ್ತಿದ್ದು, ಈಜು ಉಡುಪು ಧರಿಸಿಯೇ ಬಂದಿದ್ದ.


ಜೀವ ಉಳಿಸಲು ಪ್ರಯತ್ನ: ಈಜಾಡಲು ಬಂದಿದ್ದ ಡಾ.ನರೇಂದ್ರ ನಾಯಕ್ ಮತ್ತು ಲ್ೈಗಾರ್ಡ್ ರಾಜೇಂದ್ರ ಅವರು ಅಭಿಷೇಕ್ ಅವರ ಎದೆಯನ್ನು ಪಂಪಿಂಗ್ ಮಾಡಿದ್ದಲ್ಲದೆ, ಬಾಯಿ ಮೂಲಕ ಕೃತಕ ಉಸಿರಾಟ ನೀಡಿದ್ದಾರೆ. ಆದರೆ ನೀರಲ್ಲಿ ಮುಳುಗಿದ ಯುವಕನಿಂದ ಯಾವುದೇ ಸ್ಪಂದನೆ ಸಿಗಲಿಲ್ಲ. ಕೂಡಲೇ ಆತನನ್ನು ನಗರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಯುವಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಪೊಲೀಸರ ಪರಿಶೀಲನೆ: ಘಟನೆಯ ಬಗ್ಗೆ ಬರ್ಕೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈಜುಕೊಳಕ್ಕೆ ಯುವಕ ಬಂದಿರುವುದು, ಈಜುಕೊಳಕ್ಕೆ ಇಳಿದು ಈಜಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈಜುಕೊಳವನ್ನೇ ಕೇಂದ್ರೀಕರಿಸಿ 10ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳಿದ್ದು, ಪೊಲೀಸರು ಸಿಸಿಟಿವಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಹೃದಯಾಘಾತ ಶಂಕೆ
ಯುವಕನನ್ನು ನೀರಿನಿಂದ ಮೇಲಕ್ಕೆ ತಂದು ಪ್ರಥಮ ಚಿಕಿತ್ಸೆ ನೀಡುತ್ತಿದ್ದಾಗ ಆಹಾರ ಹಾಗೂ ರಕ್ತ ವಾಂತಿ ಮಾಡಿರುವುದಾಗಿ ಈಜುಕೊಳದ ಸಿಬ್ಬಂದಿ ತಿಳಿಸಿದ್ದಾರೆ. ಸಾಮಾನ್ಯವಾಗಿ ಈಜು ಗೊತ್ತಿಲ್ಲದ ವ್ಯಕ್ತಿಯೂ ನೀರಿನಲ್ಲಿ ಅವಘಡ ಸಂಭವಿಸುವಾಗ 2-3ಬಾರಿ ಮೇಲೆ ಬಂದು ಮತ್ತೆ ಮುಳುಗುತ್ತಾನೆ. ಆದರೆ ಈತ ಈಜಾಡುತ್ತಿರುವಾಗಲೇ ಏಕಾಏಕಿ ನೀರಿನಲ್ಲಿ ಮುಳುಗಿರುವ ಕಾರಣ ಇದು ಹೃದಯಾಘಾತ ಅಥವಾ ಆಹಾರ ಲೆಕ್ಕಕ್ಕಿಂತ ಹೆಚ್ಚಾಗಿ ಸೇವನೆ ಮಾಡಿರುವು ಕಾರಣ ಘಟನೆ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.


ದಶಕದಲ್ಲಿ ಮೂರನೇ ಸಾವು
ಮಂಗಳಾ ಈಜುಕೊಳದಲ್ಲಿ ದಶಕದಲ್ಲಿ ಇದು ಮೂರನೇ ಸಾವು. 2013 ಅ.25ರಂದು ಬೋಳೂರಿನ ವಿದ್ಯಾರ್ಥಿ ಸೋಹನ್ (13) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಈ ಘಟನೆ ಕೊಲೆ ಎಂದು ಪೋಷಕರು ಆರೋಪಿಸಿದ್ದ ಕಾರಣ ವ್ಯಾಪಕ ಸುದ್ದಿಯಾಗಿತ್ತು. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಎರಡನೇ ಘಟನೆ 2019 ಮಾ.24ರಂದು ಜೋಡುಕಟ್ಟೆ ನಿವಾಸಿ ಯಜ್ಞೇಶ್ (19) ಎಂಬವರು ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದರು. ಈಗ ಅಭಿಷೇಕ್ ಮೃತಪಟ್ಟಿದ್ದಾರೆ. ಎಲ್ಲಾ ಘಟನೆಗಳು ಸಂಜೆ 5 ಗಂಟೆಯಿಂದ 6 ಗಂಟೆ ನಡುವೆ ಸಂಭವಿಸಿವೆ. ಈಜುಕೊಳ ನವೀಕರಣ ನಡೆದ ಬಳಿಕ ಇದು ಎರಡನೇ ಸಾವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net