ಪಿಎಸ್‌ಐ ಆಗಲು ತರಬೇತಿಗೆ ಬಂದಿದ್ದಾತನಿಗೆ ಜೀವಾವಧಿ ಶಿಕ್ಷೆ ಒಲ್ಲೆನೆಂದ ಪ್ರಿಯತಮೆಯ ಕೊಲೆಗೈದ ಕೃತ್ಯ ಸಾಬೀತು

mng--4 sep Sandeep Rathod
Published on


ಮಂಗಳೂರು: ‘ವಿವಾಹವಾಗಲು ಸಾಧ್ಯವಿಲ್ಲ, ಮರೆತು ಬಿಡು’ ಎಂದ ಪ್ರಿಯತಮೆಯನ್ನು ಕೊಲೆಗೈದು ಆಕೆಯ ಮೊಬೈಲ್, ಎಟಿಎಂ ಕಾರ್ಡ್ ಸೊತ್ತುಗಳೊಂದಿಗೆ ಪರಾರಿಯಾಗಿದ್ದ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.


ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಬೆನಕೊಟ್ಗಿ ತಾಂಡಾ ನಿವಾಸಿ ಸಂದೀಪ್ ರಾಥೋಡ್ (23) ಶಿಕ್ಷೆಗೊಳಗಾದ ಅಪರಾಧಿ. ಈತ ಪ್ರಿಯತಮೆ ಚಿಕ್ಕಮಗಳೂರು ತರಿಕೆರೆಯ ಅಂಜನಾ ರಾಥೋಡ್ (22) ಎಂಬಾಕೆಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪ ಎದುರಿಸುತ್ತಿದ್ದ. ಈಕೆ ಎಂ.ಎಸ್ಸಿ ಪದವೀಧರೆಯಾಗಿದ್ದು, ಹೆತ್ತವರಿಗೆ ಏಕೈಕ ಪುತ್ರಿಯಾಗಿದ್ದಳು.


ಪ್ರಕರಣದ ಹಿನ್ನೆಲೆ: ಸಂದೀಪ್ ರಾಥೊಡ್ ಮತ್ತು ಮೃತ ಅಂಜನಾ ವಷಿಷ್ಠಾ 2018ರಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದರು. ಬಳಿಕ ಸ್ನೇಹಿತಾಗಿ, ಪರಸ್ಪರ ಪ್ರೀತಿಯ ಹಂತಕ್ಕೆ ಬಂದಿದ್ದರು. ಉದ್ಯೋಗ ಪಡೆದ ಬಳಿಕ ಮದುವೆಯಾಗುವ ಯೋಜನೆ ರೂಪಿಸಿದ್ದರು. ರಾಥೋಡ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಲು ಲಿಖಿತ ಪರೀಕ್ಷೆಯ ಪೂರ್ವ ತಯಾರಿಗೆ ಮಂಗಳೂರಿಗೆ ಬಂದಿದ್ದ. ಅತ್ತಾವರ 6ನೇ ಕ್ರಾಸ್‌ನಲ್ಲಿ ಪಾಯಿಸ್ ಕಾಟೇಜ್‌ನ ಮೊದಲ ಮಹಡಿಯಲ್ಲಿ ಮೃತ ಅಂಜನಾ ಜತೆ ಉಳಿದುಕೊಂಡಿದ್ದ. ಮನೆಯ ಮಾಲೀಕರಿಗೆ ತಾವಿಬ್ಬರೂ ದಂಪತಿಗಳೆಂದು ನಂಬಿಸಿದ್ದರು.
ಅಂಜನಾ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಆಕೆಯ ಮನೆಯವರು ಮದುವೆ ಮಾಡುವ ನಿರ್ಧಾರಕ್ಕೆ ಬಂದು ಹುಡುಗನನ್ನು ತೋರಿಸಿ ಮಾತುಕತೆ ನಡೆಸಿದ್ದರು. ಅಂಜನಾ ತಂದೆ ತಾಯಿಯ ಆಸೆಯಂತೆ ಹುಡುಗನನ್ನು ಒಪ್ಪಿಕೊಂಡಿದ್ದಳು. ಈ ವಿಚಾರವನ್ನು ಸಂದೀಪ್ ರಾಥೋಡ್‌ಗೆ ತಿಳಿಸಿ, ತನ್ನನ್ನು ಮರೆತು ಬಿಡುವಂತೆ ಹೇಳಿದ್ದಳು. ಇದರಿಂದ ಸಿಟ್ಟುಗೊಂಡು ಆರೋಪಿ ಆಕೆಯನ್ನು 2019 ಜೂ.7ರಂದು ಟಿವಿ ಕೇಬಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದ. ಹೋಗುವಾಗ ಮೃತಳ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಕಳವು ಮಾಡಿದ್ದ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿರುವ ಬ್ಯಾಂಕ್‌ನಿಂದ 15 ಸಾವಿರ ರೂ. ಹಣವನ್ನು ಡ್ರಾ ಮಾಡಿಕೊಂಡು ಪರಾರಿಯಾಗಿದ್ದ. ವಿಜಯಪುರ ಸಿಂದಗಿಯ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದಾಗ ಪೊಲೀಸರು ಆರೋಪಿಯನ್ನು ಬಂಧಿಸಿ, ಮಂಗಳೂರಿಗೆ ಕರೆ ತಂದು ತನಿಖೆ ನಡೆಸಿದ್ದರು.


ಆರೋಪಿ ವಿರುದ್ಧ ಪಾಂಡೇಶ್ವರ ಠಾಣೆಯ ಆಗಿನ ಪಿಎಸ್‌ಐ ರಾಜೇಂದ್ರ ಬಿ. ಹಾಗೂ ಇನ್‌ಸ್ಪೆಕ್ಟರ್ ಎಂ.ಕುಮಾರ್ ಆರಾಧ್ಯ ಪ್ರಮುಖ ತನಿಖೆ ನಡೆಸಿ, ಇನ್‌ಸ್ಪೆಕ್ಟರ್ ಲೋಕೇಶ್ ಎ.ಸಿ. ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.


ಈ ಪ್ರಕರಣದಲ್ಲಿ ಒಟ್ಟು 45 ಸಾಕ್ಷಿದಾರರನ್ನು ವಿಚಾರಿಸಲಾಗಿತ್ತು. 100 ದಾಖಲೆಗಳನ್ನು ಗುರುತಿಸಲಾಗಿತ್ತು. ನ್ಯಾಯಾಧೀಶರಾದ ರವೀಂದ್ರ ಎಂ. ಜೋಶಿ ಅವರು ಆರೋಪಿಯನ್ನು ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದ್ದಾರೆ.


ಭಾರತೀಯ ದಂಡ ಸಂಹಿತೆ ಕಲಂ 302ರ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ದಂಡ ತೆರಳು ತಪ್ಪಿದರೆ 3 ತಿಂಗಳ ಸಾದಾ ಸಜೆ, ಭಾರತೀಯ ದಂಡ ಸಂಹಿತೆ ಕಲಂ 380 ರ ಅಪರಾಧಕ್ಕೆ 3 ತಿಂಗಳ ಸಜೆ ಹಾಗೂ 1 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ 15 ದಿನಗಳ ಸಾದ ಸಜೆ, ಭಾರತೀಯ ದಂಡ ಸಂಹಿತೆ ಕಲಂ 403ರ ಅಪರಾಧಕ್ಕೆ 3 ತಿಂಗಳ ಸಜೆ ಮತ್ತು 500 ರೂ. ದಂಡ, ತಂಡ ತೆರಳು ತಪ್ಪಿದರೆ 15 ದಿನಗಳ ಸಾದ ಸಜೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆಯಡಿ ಮೃತಳ ಮನೆಯವರಿಗೆ ಪರಿಹಾರ ನೀಡಬೇಕೆಂದು ನಿರ್ದೇಶಿಸಿ ತೀರ್ಪು ನೀಡಿದೆ.


ಸರ್ಕಾರದ ಪರವಾಗಿ ನಿವೃತ್ತ ಸರ್ಕಾರಿ ಅಭಿಯೋಜಕ ಬಿ.ಶೇಖರ್ ಶೆಟ್ಟಿ ಸಾಕ್ಷಿ ವಿಚಾರಣೆ ನಡೆಸಿದ್ದಾರೆ. ಸರ್ಕಾರಿ ಅಭಿಯೋಜಕಿ ಜುಡಿತ್ ಓಲ್ವಾ ಮಾರ್ಗರೆಟ್ ಕ್ರಾಸ್ತಾ ಹೆಚ್ಚುವರಿ ಸಾಕ್ಷಿ ವಿಚಾರಣೆ ನಡೆಸಿ, ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net