ಕೋವಿಡ್ ಬಳಿಕ ಬೆಳಗಿದೆ ಭಾರತ: ಲಿಟ್‌ಫೆಸ್ಟ್‌ನಲ್ಲಿ ಶಕ್ತಿ ಸಿನ್ಹಾ ಅಭಿಮತ

lit fest
Published on

ಮಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗವನ್ನು ಭಾರತ ನಿರ್ವಹಿಸಿದ ರೀತಿ ಮಾದರಿ. ಕೋವಿಡ್ ನಂತರವೂ ಜಗತ್ತಿಗೇ ಲಸಿಕೆ ಒದಗಿಸುವ ಮುಂಚೂಣಿ ದೇಶವಾಗಿ ನಾವು ಹೊರಹೊಮ್ಮಿದ್ದೇವೆ. ಆ ಮೂಲಕ ‘ವಸುಧೈವ ಕುಟುಂಬಕಂ’ ಎಂಬ ನಮ್ಮ ತತ್ವ ಸಾರ್ಥಕ್ಯ ಕಾಣುತ್ತಿದೆ ಎಂದು ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಕ್ತಿ ಸಿನ್ಹಾ ಅಭಿಪ್ರಾಯಪಟ್ಟರು.

ಶನಿವಾರ ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ‘ಸಾಂಕ್ರಾಮಿಕದ ನಂತರದ ನಿರೂಪಣೆ, ಭಾರತೀಯ ಮಾರ್ಗ’ ಎಂಬ ವಿಚಾರವಾಗಿ ಮಾತನಾಡಿದ ಅವರು, ಕರೊನಾ ಬಳಿಕ ಭಾರತ ಸಂಕಷ್ಟ ಸ್ಥಿತಿಯನ್ನು ನಿಯಂತ್ರಿಸುವಲ್ಲಿ ತನ್ನದೇ ಆದ ಪಾತ್ರ ವಹಿಸಿದೆ. ನಾವು ಈ ಸಂಕಷ್ಟದ ಸಂದರ್ಭದಲ್ಲಿಯೂ ಅಭಿವೃದ್ಧಿಯತ್ತ ಹೆಜ್ಜೆ ಇರಿಸಿದ್ದೇವೆ ಎಂದರು

ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್(ರಾ) ಮಾಜಿ ಮುಖ್ಯಸ್ಥ ವಿಕ್ರಂ ಸೂದ್ ಮಾತನಾಡಿದರು. ಮಾಹೆ ಯುನೆಸ್ಕೋ ಪೀಠದ ಅಧ್ಯಕ್ಷ ಪ್ರೊ.ಮಾಧವ ನಲಪಾಡ್ ಮಾತನಾಡಿ, ಭಾರತದ ಇತಿಹಾಸ 6000 ವರ್ಷಗಳದ್ದು, ಅದನ್ನು ಒಗ್ಗೂಡಿಸುವ ಕೆಲಸವೀಗ ಹೊಸ ಶಿಕ್ಷಣ ನೀತಿ ಮೂಲಕ ಆಗಲಿದೆ, ನಮ್ಮ ಹೀರೊಗಳನ್ನು ಕೇವಲ ಕಾಲ್ಪನಿಕ ಎಂದು ಹೇಳಿರುವ ಪಾಶ್ಚಿಮಾತ್ಯ ಚರಿತ್ರೆಕಾರರ ಸುಳ್ಳುಗಳನ್ನು ಬಯಲು ಮಾಡಬೇಕೆಂದರು.

ಗೋವಾ ವಿವಿಯ ಡಾ.ದತ್ತೇಶ್ ಡಿ.ಪ್ರಭು ಪರುಲೇಖರ್ ಮಾತನಾಡಿ, ಕರೊನಾ ನಂತರ ಯುರೋಪ್ ಹಾಗೂ ಅಮೆರಿಕ ಗೊಂದಲದಲ್ಲಿದ್ದಾಗ ಭಾರತ ಸಾರ್ಕ್ ದೇಶಗಳ ಸಭೆ ಕರೆದು ಎಲ್ಲರ ಸುರಕ್ಷತೆಯತ್ತ ಒತ್ತು ನೀಡುವ ಬಗ್ಗೆ ಮಾತನಾಡಿತು. ಆ ಮೂಲಕ ಹೊಸ ರೀತಿಯ ನಾಯಕತ್ವವನ್ನು ಪ್ರದರ್ಶಿಸಿತು ಎಂದು ವಿಶ್ಲೇಷಿಸಿದರು. ಮಾಹೆ ಭೌಗೋಳಿಕ ರಾಜಕೀಯ ಶಾಸ್ತ್ರ ವಿಭಾಗದ ಡಾ.ನಂದಕಿಶೋರ್ ಎಂ.ಎಸ್ ಸಮನ್ವಯಕಾರರಾಗಿದ್ದರು.

ನಿಲವು ನಿರೂಪಣೆಗೆ ಶಕ್ತಿ: ಇಂದಿನ ಯುಗದಲ್ಲಿ ಮಿಲಿಟರಿ ಶಕ್ತಿ, ತಂತ್ರಜ್ಞಾನದ ಬಲದೊಂದಿಗೆ ನಮ್ಮ ಇರುವಿಕೆಯನ್ನು ಹೇಗೆ ಜಗತ್ತಿಗೆ ನಿರೂಪಿಸುತ್ತೇವೆ ಎಂಬುದೂ ಮುಖ್ಯ ಎಂದು ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್(ರಾ) ಮಾಜಿ ಮುಖ್ಯಸ್ಥ ವಿಕ್ರಂ ಸೂದ್ ಹೇಳಿದರು. ನಮ್ಮ ನಿರೂಪಣೆ ನಮ್ಮ ಪರಂಪರೆಯಿಂದ ಮೂಡಬೇಕು. ಪರಂಪರೆಯ ಬಗ್ಗೆ ಹೆಮ್ಮೆ ಬೇಕು, ನಮ್ಮ ಭೂತಕಾಲದಿಂದ ಕಲಿತುಕೊಳ್ಳೋಣ. ಆದರೆ ಅದರಲ್ಲಿ ಬದುಕುವುದು ಬೇಡ ಎಂದ ಅವರು, ನಮ್ಮ ದೇಶ ನಮ್ಮಿಂದಲೇ ಉತ್ತಮವಾಗಬೇಕು, ಕಳೆದ ಕೆಲವು ವರ್ಷಗಳಿಂದ ನಮ್ಮ ಪ್ರಾಮಾಣಿಕ ಪ್ರಯತ್ನ ಆ ಕಡೆಗಿದೆ ಎಂದರು.

‘ನೆಲದ ಭಾಷೆ, ಮನದ ಮಾತು..’ : ಆಧುನಿಕತೆ, ಹೊಸ ತಂತ್ರಜ್ಞಾನದ ಅಗಾಧ ಸಾಧ್ಯತೆಗಳಿಗೆ ತೆರೆದುಕೊಳ್ಳುವ ಹುಮ್ಮಸ್ಸು ನಡುವೆ ನೆಲದ ದೇಸಿ ಸಂಸ್ಕೃತಿಯ ಸೊಗಡಿನ ದಾಖಲೀಕರಣ ಕಾರ್ಯ ನಿರಂತರ ನಡೆಯಬೇಕು.

ಲಿಟ್ ಫೆಸ್ಟ್‌ನ ಮೂರನೇ ಆವೃತ್ತಿಯಲ್ಲಿ ‘ನೆಲದ ಭಾಷೆ, ಮನದ ಮಾತು: ನವಭಾರತಕೆ ದೇಸೀ ಸೊಗಡು’ ಗೋಷ್ಠಿಯಲ್ಲಿ ವಿಷಯ ಮಂಡಿಸಿದ ತಜ್ಞರ ಅಭಿಪ್ರಾಯ. ತಾಂತ್ರಿಕತೆಯು ಹೆಚ್ಚಿನ ವಿಚಾರಗಳನ್ನು ದಾಖಲಿಸಲು, ಸಮಾಜಕ್ಕೆ ಯಾವುದನ್ನೋ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಮುಖ್ಯವಾಗುತ್ತದೆ. ಯಾವ ಮಹಾಕಾವ್ಯಗಳಲ್ಲಿ ಗುರುತಿಸಲಾಗಿಲ್ಲವೋ ಅವುಗಳನ್ನು ಜನಪದರು ಗುರುತಿಸಿದ್ದಾರೆ. ಇದನ್ನು ದಾಖಲೀಕರಿಸಲು ಸಾಧ್ಯವಿದೆ. ಗೊತ್ತಿಲ್ಲದ ಹಲವು ಕಥೆಗಳು ಜನಪದದ ಮೂಲಕ ತಿಳಿಯುವುದು ಸಾಧ್ಯವಿದೆ ಎಂದು ಹಿರಿಯ ಪತ್ರಕರ್ತ ಸತ್ಯಬೋಧ್ ಜೋಶಿ ಹೇಳಿದರು.

ಹಾವೇರಿ ಜಾನಪದ ವಿವಿಯ ಡಾ. ಆನಂದಪ್ಪ ಬಿ.ಎಚ್.ಜೋಗಿ ಮಾತನಾಡಿ, ಕೋವಿಡ್ ಕಾಲದಲ್ಲಿ ಹಂಚಿ ಉಣ್ಣುವ ಅಗತ್ಯವನ್ನು ಜಗತ್ತಿನ ಜನ ಕಂಡಿದ್ದಾರೆ. ಆದರೆ ದೇಸಿ ಸಂಸ್ಕೃತಿಯು ಹಂಚಿ ಉಣ್ಣುವ ಪದ್ಧತಿಯನ್ನು ತಮ್ಮ ಬದುಕಿನ ಭಾಗವಾಗಿಯೇ ರೂಢಿಸಿಕೊಂಡು ಬಂದಿದೆ. ಉದಾಹರಣೆಗೆ ಬುಡಕಟ್ಟು ಸಮುದಾಯ ಬೇಟೆಯಾಡಿದ ಬಳಿಕ ದೊರೆತ ಪ್ರಾಣಿಯನ್ನು ಬೇಟೆಯಲ್ಲಿ ಭಾಗವಹಿಸಿದವರಿಗೆ ಮಾತ್ರವಲ್ಲದೆ, ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳದೆ ಮನೆಯಲ್ಲಿ ಇದ್ದವರು, ಜತೆಗೆ ಇದ್ದ ನಾಯಿಗಳಿಗೆ ಕೂಡ ಬೇಟೆಯ ಪಾಲು ದೊರೆಯುತ್ತಿತ್ತು ಎಂದು ಅವರು ವಿಶ್ಲೇಶಿಸಿದರು.

ಜಾನಪದ ಕಲಾವಿದೆ ಮಂಗಳಾ ಸಿದ್ದಿ ಮಾತನಾಡಿ, ಈ ಸಮಾಜದ ನೆಲದ ಮಾತನ್ನು ಉಳಿಸುವ ಕೆಲಸವನ್ನು ಹಿರಿಯರು ಮಾಡಿದ್ದಾರೆ. ಆಧುನಿಕತೆಯ ಭರಾಟೆಯಲ್ಲಿ ಜನಪದ ಎಂಬುದು ಕಳೆದು ಹೋಗುತ್ತಿದೆ. ಅದನ್ನು ಉಳಿಸುವ ಕಾರ್ಯ ನಡೆಯಬೇಕು. ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನೆಲದ ಸಂಸ್ಕೃತಿ ಮೆರೆಯಬೇಕಾದವರು ಮರೆಯುತ್ತಿದ್ದೇವೆ. ಬೇರೆಯೇ ಲೋಕದಲ್ಲಿ ಬದುಕುತ್ತಿದ್ದೇವೆ. ಇದು ಅಪಾಯದ ಸನ್ನಿವೇಶವೋ, ಸವಾಲೋ ಎಂಬುದು ಇಂದಿನ ಪ್ರಶ್ನೆ. ಇದಕ್ಕೆ ಉತ್ತರ ನೆಲದ ಮಾತಾದ ಜನಪದದಲ್ಲಿ ಸಿಗುತ್ತದೆ. ಅವನ್ನು ಉಳಿಸಬೇಕು ಎಂದು ವಿಚಾರ ಸಂಕಿರಣದ ಸಮನ್ವಯಕಾರ ರೋಹಿಣಾಕ್ಷ ಶಿರ್ಲಾಲು ತಿಳಿಸಿದರು.

ಪಠ್ಯದಲ್ಲಿ ದೇಸಿ, ಜನಪದ : ಪಠ್ಯದಲ್ಲಿ ದೇಸಿ ಸಂಸ್ಕೃತಿಕ ಲಿಯಲು ಅವಕಾಶ ಒದಗಿಸಬೇಕು ಎಂದು ಹಾವೇರಿ ಜಾನಪದ ವಿವಿಯ ಡಾ. ಆನಂದಪ್ಪ ಬಿ.ಎಚ್. ಜೋಗಿ ಅಭಿಪ್ರಾಯಪಟ್ಟರು. ಶಾಲೆಗೆ ಬರುವ ವಿದ್ಯಾರ್ಥಿಗಳಲ್ಲಿ ಅವರ ಆಚಾರ-ವಿಚಾರ, ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಸಂಸ್ಥೆಯ ಬೋಧಕ ವರ್ಗ ಮಾಹಿತಿ ಪಡೆಯಬೇಕು. ಇದರಿಂದ ಬೋಧಕ ವರ್ಗಕ್ಕೆ ಒಂದು ಹೊಸ ಸಾಂಸ್ಕೃತಿಕ ಬದುಕಿನ ತಿಳಿವಳಿಕೆ ದೊರೆಯುತ್ತದೆ. ಮಕ್ಕಳಿಗೆ ಸ್ವತಃ ತಮ್ಮ ಸಮುದಾಯದ ಸಾಂಸ್ಕೃತಿಕ ಶ್ರೀಮಂತಿಕೆಯ ಬಗ್ಗೆ ಕುತೂಹಲ ಬೆಳೆಯುತ್ತದೆ ಎಂದು ಜಾನಪದ ಕಲಾವಿದೆ ಮಂಗಳಾ ಸಿದ್ದಿ ಸಲಹೆ ನೀಡಿದರು.

ವಿಷಮತೆಗೆ ಸಾಹಿತ್ಯ ಪರಿಹಾರ ರೂಪಿಸಬೇಕು: ಸಮಾಜವನ್ನು ಆವರಿಸುವ ವಿಷಮತೆಗೆ ಸಾಹಿತ್ಯ ಪರಿಹಾರ ರೂಪಿಸಬೇಕು. ಸಾಹಿತ್ಯ ಗೋಳಾಟವನ್ನು ಬಿಂಬಿಸುವ ಬದಲು ವಿಷಮತೆಯನ್ನು ಮೀರಿ ನಿಲ್ಲುವ ಶಕ್ತಿ ನೀಡಬೇಕು.

ವಿಷಮತೆಯ ಮಥನದಲ್ಲಿ ಮೂಡಿದ ಸಾಹಿತ್ಯ ಸುಧೆ-ಕನ್ನಡದ ಮುಂದಿನ ಹಾದಿ ಎಂಬ ಗೋಷ್ಠಿಯಲ್ಲಿ ವಿಷಯ ಮಂಡಿಸಿದ ತಜ್ಞರ ಅಭಿಪ್ರಾಯ.
ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ್, ವಿಷಮತೆ ಮನುಷ್ಯನೇ ಕಂಡುಕೊಂಡ ಮನೋಲೋಕದ ಸೃಷ್ಟಿ. ಸಾಹಿತ್ಯ ಹುಟ್ಟುವುದೇ ವಿಷಮತೆೆಯಿಂದ. ಮುಂದೇನಾಗಬಹುದು ಎಂದು ನೊಂದು ಭವಿಷ್ಯದ ಚಿಂತೆಯಲ್ಲೇ ಕಳೆದರೆ ಸುಖ ಅಸಾಧ್ಯ. ಆಪತ್ತು ತೇಲಿಸಲೆಂದೇ ಸಾಹಿತ್ಯದ ದೋಣಿ ಇದ್ದು, ಅದನ್ನು ಬಳಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸಾಹಿತ್ಯ ಆತ್ಮಶೋಧನೆಯ ಸಾಧನೆ ಎಂದರು.

ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಡಾ.ಗಿರೀಶ್ ಭಟ್ ಅಜಕ್ಕಳ ಮಾತನಾಡಿ ಕರೊನಾ ವಿಷಮ ಪರಿಸ್ಥಿತಿಯ ಬಗ್ಗೆ ಅಂಕಣ, ವರದಿ ರೂಪದ ಸಾಹಿತ್ಯ ಸಾಕಷ್ಟು ಬಂದಿದೆ. ಆದರೆ ಸಾಹಿತಿಗೆ ಕಲಾತ್ಮಕ ಸೃಷ್ಟಿಯನ್ನು ಹೊರತರಬೇಕೆಂಬ ಅಭಿಲಾಷೆ ಇರುತ್ತದೆ. ಹಾಗಾಗಿ ದೊಡ್ಡ ಕೃತಿ ಬರಲು ಸಮಯ ಬೇಕಾಗಬಹುದು. ವಿಷಮತೆ ಎಲ್ಲರಿಗೂ ಒಂದೇ ರೀತಿ ಬಾಧಿಸದೇ ಇರಬಹುದು. ನಮ್ಮೊಳಗಿನ ಕಲ್ಪನೆಯ ತೀವ್ರತೆಗೆ ಅನುಗುಣವಾಗಿಯೇ ಸಾಹಿತ್ಯ ಸೃಷ್ಟಿಯಾಗುವುದು ಎಂದರು.

ಅರೆ ಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿ, ಸಾಹಿತ್ಯ ಮಾತ್ರವಲ್ಲ ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ವಿಷಮತೆ ಆವರಿಸಿದೆ ಎಂದು ಅಭಿಪ್ರಾಯಪಟ್ಟರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ರೋಹಿತ್ ಚಕ್ರತೀರ್ಥ ಗೋಷ್ಠಿಯ ಸಮನ್ವಯಕಾರರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net