

ಮಂಗಳೂರು: ಕನ್ನಡ ಭಾಷೆಯ ಅನೇಕ ಪದಗಳು ಸಂಸ್ಕೃತ ಮೂಲದ್ದಾಗಿವೆ. ಕನ್ನಡ ನಾಡಿನ ಊರಿನ ಹೆಸರುಗಳೂ ಸಂಸ್ಕೃತ ಭಾಷೆ ಆಧಾರಿತವಾಗಿವೆ. ಸಂಸ್ಕೃತ ಬಿಟ್ಟರೆ ಕನ್ನಡಕ್ಕೆ ಅಪಾಯ ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಹೇಳಿದರು.
ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಭಾನುವಾರ ನಡೆದ ಸಂವಾದದಲ್ಲಿ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನನ್ನ ಕಾದಂಬರಿಗಳಲ್ಲಿ ಎದುರಾಗುವ ಸಂಕಟದ ಚಿತ್ರಣ ಹಾಗೂ ಪಾತ್ರಗಳು ನನ್ನ ಅನುಭವದಿಂದಲೇ ಬಂದವು. ಸಣ್ಣ ವಯಸ್ಸಿನಲ್ಲೇ ನನ್ನ ತಾಯಿ ನನಗೆ ಕುಮಾರವ್ಯಾಸ ಭಾರತವನ್ನು ಕಂಠಪಾಠ ಮಾಡಿಸಿದ್ದರು. ಕುಂತಿ ಹಾಗೂ ಕರ್ಣ ನದಿ ತೀರದಲ್ಲಿ ಭೇಟಿಯಾಗುವ ಸಂಕಟದ ಸನ್ನಿವೇಶ ಹಳ್ಳಿಯ ರೈತರಿಗೂ ಹತ್ತಿರವಾದ ವಿಷಯವಾಗಿತ್ತು. ಪರ್ವ ಕಾದಂಬರಿ ಬರೆಯುವ ಮುನ್ನ ಹಿಮಾಲಯ ಸಹಿತ ದೇಶಾದ್ಯಂತ ಸುತ್ತಿದ್ದೇನೆ. ಹೀಗೆ ನನ್ನ ಅನುಭವಗಳೇ ಕಾದಂಬರಿಯಲ್ಲಿ ಪ್ರತಿಫಲನಗೊಂಡಿವೆ ಎಂದು ಹೇಳಿದರು.
ನಿರಂತರ ಬರವಣಿಗೆಯಿಂದ ಒಂದು ಬಾರಿ ಮನೆಯಲ್ಲೇ ಬಿದ್ದು ಗಾಯ ಮಾಡಿಕೊಂಡಿದ್ದೆ. ವೈದ್ಯರಲ್ಲಿಗೆ ತೆರಳಿದಾಗ ಎದ್ದು ನಿಲ್ಲುವಂತೆ ಮಾಡುತ್ತೇವೆ, ಆದರೆ, ನಿರಂತರ ಬರವಣಿಗೆ ನಿಲ್ಲಿಸಬೇಕು. ಒಂದು ವಾರ ಬರೆದರೆ ಮತ್ತೆ ಒಂದು ವಾರ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸೂಚಿಸಿದ್ದರು. ಮನೋವೈದ್ಯಕೀಯ ತಜ್ಞರನ್ನು ಭೇಟಿಯಾಗಿದ್ದೆ. ಮನಸ್ಸಿಗೆ ವಿಶ್ರಾಂತಿ ಅಗತ್ಯ ಎಂದು ವೈದ್ಯರು ಹೇಳಿದ್ದರು. ವಿಶ್ರಾಂತಿಗಾಗಿ ಪರಿಚಯದವರೊಬ್ಬರ ಮನೆಗೆ ತೆರಳಿದ್ದಾಗ ಗನ್ ಹೊಡೆಯುವುದನ್ನು ಕಲಿತೆ ಎಂದು ಬರವಣಿಗೆಯ ಕಷ್ಟ ಸುಖಗಳನ್ನು ಹಂಚಿಕೊಂಡರು.
ಕಾದಂಬರಿಗಳಲ್ಲಿ ನಾನು ಸೃಷ್ಟಿಸಿದ ಪಾತ್ರಗಳು ನನ್ನ ಮೇಲೆ ಪ್ರಭಾವ ಬೀರಿಲ್ಲ. ನಾನು ಬರೆದಿರುವ ಪಾತ್ರಗಳು ಕ್ರಿಯೇಟಿವ್ ಹಾಗೂ ನನ್ನ ಕಲ್ಪನೆ. ಹಿಂದೂಸ್ತಾನಿ ಸಂಗೀತ ನನಗೆ ಇಷ್ಟ. ಮಂದ್ರ ಸಂಗೀತದ ಮೇಲೆ ರಚನೆಗೊಂಡ ಕಾದಂಬರಿಯಾಗಿದೆ. ಡಿ.ಲಿಟ್ ಪದವಿ ಪಡೆದು ನಾನೂ ಡಾ. ಎಸ್. ರಾಧಾಕೃಷ್ಣನ್ ಅವರಂತೆ ದೊಡ್ಡ ಪ್ರೊಫೆಸರ್ ಆಗಬೇಕು ಎಂಬ ಬಯಕೆ ನನ್ನಲ್ಲಿತ್ತು. ಅಮೆರಿಕಾದಲ್ಲಿ ಪ್ರಾಧ್ಯಾಪಕ ಆಗಬೇಕು ಎಂಬ ಹಂಬಲವಿತ್ತು. ಇದೇ ವೇಳೆ ವಂಶವೃಕ್ಷ ಬರೆದೆ ಎಂದರು.
ಮಂದ್ರ ಕಾದಂಬರಿ ಬರೆಯುವ ಮುನ್ನ ಕಾಶಿಯಲ್ಲಿ ಸಂಗೀತ ವಿದ್ವಾಂಸರನ್ನು ಭೇಟಿ ಮಾಡಿದ್ದೆ. ಅವರನ್ನು ನೋಡಿ ಮಾತನಾಡಿ, ಚರ್ಚಿಸಿ, ನೋಟ್ಸ್ ಮಾಡಿಕೊಂಡಿದ್ದೆ. ಸಂಜೆ ವೇಳೆ ಸಂಗೀತ ಕೇಳದಿದ್ದರೆ ತಲೆನೋವು ಶುರುವಾಗುತ್ತಿತ್ತು. ಸಂಗೀತದಿಂದ ಮುಖ್ಯವಾಗಿ ಮನಃಶಾಂತಿ ದೊರೆಯುತ್ತದೆ. ಹೆಂಗಸರು ಹಾಡಿದ ಸಂಗೀತದಲ್ಲಿ ಭಾವ, ಶಾಂತಿ ಅಧಿಕ ಎಂದು ಸಂಗೀತದ ಸೆಳೆತದ ಬಗ್ಗೆ ಹೇಳಿದರು.
ವಿದ್ವಾಂಸ ಡಾ.ಜಿ. ಬಿ. ಹರೀಶ ಸಂವಾದ ನಡೆಸಿಕೊಟ್ಟರು.
ಪುಸ್ತಕ ಬಿಡುಗಡೆ
ಸತೀಶ್‌ಎನ್. ಬೆಳ್ಳೂರು ಅವರು ರಚಿಸಿದ ಬೋಗಸೆ ಇಲ್ಲಿ ವಿಶ್ವ-ನಾ ಕಂಡುಕೊಂಡ ಸತ್ಯಗಳು , ಚಾಣಕ್ಯ, ಕನ್ನಡೋತ್ಸವ: ಇದು ಕನ್ನಡಿಗರ ಆತ್ಮಕಥೆ ಎಂಬ ಪುಸ್ತಕಗಳನ್ನು ಈ ವೇಳೆ ಬಿಡುಗಡೆ ಮಾಡಲಾಯಿತು. ಸಾಹಿತ್ಯ ಮತ್ತು ಚಿಂತನೆಯ ಹೊಸ ಆಯಾಮವನ್ನು ಒಳಗೊಂಡ ವಿಶೇಷ ಅಂಕಣವನ್ನು ಅನಾವರಣಗೊಳಿಸಲಾಯಿತು.
ಪ್ರಕಾಶ್ ಮಲ್ಪೆ ಅವರ ಬೆಳಕು ಒಂದು ಎಳೆಗೇ ಬಂದು, ಗುರುಪ್ರಸಾದ್‌ಅವರ ಛತ್ರಪತಿ ಶಿವಾಜಿ, ಸುದರ್ಶನ ಅವರ ಎವರ್ಗ್ರೀನ್ ಹಂಪಿ ಎಂಬ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.