ತತ್ವಶಾಸ್ತ್ರದ ರಸ ಸಾಹಿತ್ಯದ ಜೀವಾಳ - ಲಿಟ್ ಫೆಸ್ಟ್ ಸಮಾರೋಪದಲ್ಲಿ ಶತಾವಧಾನಿ ಡಾ.ಆರ್.ಗಣೇಶ್ ಅಭಿಮತ

mng--12 Jam lit fest samaropaa
Published on

ಮಂಗಳೂರು: ಭಾರತೀಯ ತತ್ವಶಾಸ್ತ್ರದಲ್ಲಿ ಬ್ರಹ್ಮ, ಧರ್ಮ ಮತ್ತು ರಸ ಪ್ರಮುಖವಾಗಿದ್ದು, ರಸವೇ ಸಾಹಿತ್ಯದ ಜೀವಾಳ, ಸೌಹಾರ್ದತೆಯ ಮೂಲ ಹಾಗೂ ಕಲಾ ಪರಂಪರೆಯ ಆಧಾರ ಸ್ತಂಭ ಎಂದು ಶತಾವಧಾನಿ ಡಾ.ಆರ್.ಗಣೇಶ್ ಹೇಳಿದರು.

ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರಿನಲ್ಲಿ ನಡೆದ 7ನೇ ಲಿಟ್ ಫೆಸ್ಟ್‌ನ ಸಮಾರೋಪ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಂಸ್ಕೃತ ಕಾವ್ಯಶಾಸ್ತ್ರ ಅಂತರ್ಜಾಲದಲ್ಲಿ ಸುಲಭವಾಗಿ ಸಿಗುತ್ತದೆ. ಇದರ ಮೇಲಿಟ್ಟ ಪ್ರೀತಿಯಿಂದ ಸಾಧ್ಯವಾಗಿದೆ. ಶಾಸ್ತ್ರೀಯ ಸಂಗೀತವನ್ನೂ ಇದೇ ರೀತಿಯಲ್ಲಿ ನಡೆಸಿಕೊಂಡು ಬರಲಾಗಿದೆ. ಕಲೆ, ಸಾಹಿತ್ಯವನ್ನು ಮೌಲ್ಯವಾಗಿ ನೋಡಬೇಕು. ಇದರ ಅನನ್ಯತೆಯನ್ನು ಉಳಿಸಿಕೊಳ್ಳಲು ಇಂತಹ ಪ್ರೀತಿ ತುಂಬ ಅಗತ್ಯ ಎಂದರು.

ಕುಮಾರವ್ಯಾಸ ಭಾರತವನ್ನು ಸಂಸ್ಕೃತಕ್ಕೆ ಅನುವಾದ ಮಾಡುವುದು ಕಷ್ಟಕರ. ಸಂಸ್ಕೃತಕ್ಕೇ ಅನುವಾದ ಕಷ್ಟವಾದರೆ ಇತರ ಭಾಷೆಗಳಿಗೆ ಅನುವಾದ ಹೇಗಾದೀತು? ಭಾಷೆಗಿರುವ ಸೂಕ್ಷ್ಮತೆ ಅಂಥದ್ದು ಎಂದವರು ಹೇಳಿದರು.

ನಮ್ಮ ದೇಶದಲ್ಲಿ ಸಿಗುವಷ್ಟು ಶಾಸ್ತ್ರಗಳು ಎಲ್ಲೂ ಸಿಗುವುದಿಲ್ಲ. ಆದರೆ ಈ ಶಾಸ್ತ್ರಗಳನ್ನು ಓದುವವರು ಎಷ್ಟು ಮಂದಿ ಇದ್ದಾರೆ? ವಿಶ್ವ ವಿದ್ಯಾಲಯಗಳು, ಅಕಾಡೆಮಿಗಳು ಪರಿಶ್ರಮದ ಪಾಂಡಿತ್ಯಕ್ಕೆ ಅವಕಾಶ ಮಾಡಿಕೊಡಬೇಕು. ಪ್ರಸ್ತುತ ಭಾಷೆಯ ಗಂಭೀರ ಅಧ್ಯಯನ ಕಡಿಮೆಯಾಗಿದೆ. ಪಠ್ಯ ಕೇಂದ್ರಿತ ಅಧ್ಯಯನ ಮಾಡುವುದು ಮುಖ್ಯ. ಇಂತಹ ಅಧ್ಯಯನಕ್ಕೆ ಅರ್ಥೈಸುವ ಸಾಮರ್ಥ್ಯ ಇದೆ ಎಂದು ಸಲಹೆ ನೀಡಿದರು.

ಪ್ರಸ್ತುತ ಅಸಂಬದ್ಧವಾಗಿ ಬರೆಯುವವರಿಗೆ ಉತ್ತರ ನೀಡುವವರು ನಮ್ಮಲ್ಲಿ ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡಿದ ಆರ್.ಗಣೇಶ್, ಕಲೆ, ಸಾಹಿತ್ಯ ಕಮ್ಯೂನಿಟಿ ಸೆಂಟ್ರಿಕ್ ಆಗುವುದಕ್ಕಿಂತ ಮುಖ್ಯವಾಗಿ ಅದರ ಸ್ವಾಯತ್ತತೆ, ಮೌಲ್ಯ ಉಳಿಸಿಕೊಳ್ಳುವ ಪ್ರೀತಿಯ ಕಾರ್ಯ ಆಗಬೇಕು ಎಂದು ಹೇಳಿದರು.

ಲೇಖಕ ಡಾ.ಅಜಕ್ಕಳ ಗಿರೀಶ್ ಭಟ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net