

ಮಂಗಳೂರು: ನಮ್ಮ ದೇಶವನ್ನು ಕೇವಲ ಆಧ್ಯಾತ್ಮಿಕ ಮಾತ್ರವಲ್ಲ ನಾಯಕತ್ವ ದೃಷ್ಟಿಯಿಂದ ನೋಡಬೇಕು ಎಂದು ಕೇಂದ್ರ ಮಾನವ
ಸಂಪನ್ಮೂಲ ಸಾಮರ್ಥ್ಯ ಆಯೋಗ ಸದಸ್ಯ ಹಾಗೂ ವಿವೇಕಾನಂದ ಯೂತ್ ಮೂವ್‌ಮೆಂಟ್ ಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ ಆಶಯ ವ್ಯಕ್ತಪಡಿಸಿದರು.
ಭಾರತ್ ಫೌಂಡೇಶನ್ ವತಿಯಿಂದ ನಗರದಲ್ಲಿ ನಡೆದ ಲಿಟ್ ಫೆಸ್ಟ್-2025ರ 2ನೇ ದಿನ ಭಾನುವಾರ ಈ ಸಾಲಿನ ಮಂಗಳೂರು ಲಿಟ್ ಫೆಸ್ಟ್ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಈಗಿನ ಯುವಜನತೆ ದೇಶದ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ದೇಶದ ಕೊರತೆಗೆ ನಮ್ಮಲ್ಲೇ ಉತ್ತರ ಕಂಡುಕೊಳ್ಳುವ ಬದಲು ಪಾಶ್ಚಾತ್ಯದತ್ತ ಮುಖ ಮಾಡುತ್ತೇವೆ. ವಿದೇಶಿಗರು ನಮ್ಮ ದೇಶದತ್ತ ನೋಡುತ್ತಿದ್ದಾರೆ.
ನಗರದಲ್ಲಿ ಜನಿಸಿದವರಿಗೆ ನಾನು ಗೊತ್ತು, ನಾವು ಎಂಬುದು ಗೊತ್ತಿಲ್ಲ. ಆದಿವಾಸಿಗಳಿಗೆ ನಮ್ಮದೇ ಎಂಬುದು ಗೊತ್ತು. ನಮ್ಮನ್ನು ವಿಂಗಡಿಸಿ
ಗುರುತಿಸುತ್ತೇವೆಯೇ ವಿನಃ ಭಾರತೀಯ ಎಂದು ಹೇಳಿಕೊಳ್ಳುತ್ತಿಲ್ಲ. ನಾವು ಜೀವನದಲ್ಲಿ ಸ್ಫೂರ್ತಿಯುತವಾಗಿ ಪಯಣಿಸುತ್ತಾ ನಾಯಕತ್ವ ಗುಣ ರೂಢಿಸಿಕೊಂಡು ದೇಶದ ಸಂಸ್ಕೃತಿ ಬಗ್ಗೆ ಸಂದೇಶ ನೀಡಬೇಕು ಎಂದರು.
ಈ ಸಂದರ್ಭ ಇವರ ‘ಪವರ್ ವಿತ್ ಇನ್’ ಆಂಗ್ಲ ಕೃತಿಯನ್ನು ಸಂಸದ ಹಾಗೂ ಭಾರತ್ ಫೌಂಡೇಷನ್ ಟ್ರಸ್ಟಿ ಕ್ಯಾ.ಬ್ರಿಜೇಶ್ ಚೌಟ ಅನಾವರಣಗೊಳಿಸಿದರು.
ಮಿಥಿಕ್ ಸೊಸೈಟಿ ಗೌರವ ಕಾರ್ಯದರ್ಶಿ ಡಾ.ರವಿ, ಟ್ರಸ್ಟಿ ಶ್ರೀರಾಜ್ ಗುಡಿ ಉಪಸ್ಥಿತರಿದ್ದರು.