ಮಂಗಳೂರಿಗೆ ಸೋಂಕಿತರ ‘ಲಿಂಕ್’ ಭೀತಿ

carona logo
Published on

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸಿದ ಹಲವರಲ್ಲಿ ಕರೊನಾ ಪಾಸಿಟಿವ್ ಪತ್ತೆಯಾಗಿರುವುದು ಮತ್ತು ಇವರಲ್ಲಿ ಕೆಲವರು ಮಂಗಳೂರು ನಗರ ಆಸುಪಾಸು ಸುತ್ತಾಡಿರುವುದು ಆತಂಕ ಸೃಷ್ಟಿಸಿದೆ.

ಮಂಗಳೂರಿಗೆ ನೇರವಾಗಿ ಸಂಪರ್ಕ ಇಲ್ಲದ ಭಟ್ಕಳ ಮತ್ತು ಕಾಸರಗೋಡು ನಿವಾಸಿಗಳು ಕಳೆದ ಒಂದು ವಾರದಿಂದ ಮಂಗಳೂರು ಮೂಲಕ ಸಾಗಿದ್ದಾರೆ. ಇವರು ವಿಮಾನ, ಬಸ್, ರೈಲು, ಕಾರುಗಳಲ್ಲಿ ಪ್ರಯಾಣಿಸಿರುವುದು, ಆಸ್ಪತ್ರೆಗಳಿಗೆ ಭೇಟಿ ನೀಡಿರುವುದು, ಇಲ್ಲಿನವರ ಜತೆ ಸಂಪರ್ಕ ಹೊಂದಿರುವುದು ಕಳವಳಕ್ಕೆ ಕಾರಣ. ಸಾಮುದಾಯಿಕವಾಗಿ ಸೋಂಕು ಹರಡಲು ಇದು ಕಾರಣವಾಗಬಹುದು ಎಂಬ ಭೀತಿ ಇದೆ.

‘ಕರೊನಾ ಸೋಂಕು ಬಾಧಿಸಿರುವುದು ತಕ್ಷಣಕ್ಕೆ ತಿಳಿಯುವುದಿಲ್ಲ, 14 ದಿನಗಳ ಕಾಲಾವಕಾಶ ಇರುವುದರಿಂದ ಈ ಇನ್‌ಕ್ಯುಬೇಶನ್ ಅವಧಿ ಪೂರ್ಣಗೊಳ್ಳುವವರೆಗೆ ಪಾಸಿಟಿವ್ ಪ್ರಕರಣಗಳು ಸಮುದಾಯದಲ್ಲಿ ಕಾಣಿಸಿಕೊಳ್ಳದಿದ್ದರೆ ಮಂಗಳೂರು ಒಂದು ಹಂತದವರೆಗೆ ಸುರಕ್ಷಿತ’ ಎನ್ನುತ್ತಾರೆ ವೈದ್ಯರು.

ಬಂದವರು ಯಾರೆಲ್ಲ?: ಮಂಗಳೂರಿನಲ್ಲಿ ಮೊದಲ ಪಾಸಿಟಿವ್ ಎಂದು ಗುರುತಿಸಲ್ಪಟ್ಟವ ಭಟ್ಕಳದ 22ರ ಯುವಕ ಮಾ.19ರಂದು ದುಬೈನಿಂದ ವಿಮಾನದಲ್ಲಿ ಬಂದಿದ್ದರು. ರೋಗ ಲಕ್ಷಣಗಳಿದ್ದುದರಿಂದ ವಿಮಾನ ನಿಲ್ದಾಣದಿಂದ ನೇರವಾಗಿ ವೆನ್ಲಾಕ್‌ಗೆ ತರಲಾಗಿತ್ತು. ಅವರಿಗೆ ಪಾಸಿಟಿವ್ ಎಂದು ದೃಢವಾಗುತ್ತಿದ್ದಂತೆ ವೆನ್ಲಾಕ್‌ನಲ್ಲಿ ಜತೆಗಿದ್ದ ಪರಿಚಯದವರೇ ಆಗಿದ್ದ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ. ಅವರಿಗೆ ಸೋಂಕು ತಗಲಿರುವ ಸಾಧ್ಯತೆಗಳಿವೆ, ಅಲ್ಲದೆ ವೆನ್ಲಾಕ್‌ನಲ್ಲಿ ಸೋಂಕು ಪಸರಿಸಿರಬಹುದಾದ ಅನೇಕ ಸಾಧ್ಯತೆಗಳಿವೆ. ಈ ಕುರಿತು ಬಹಿರಂಗವಾಗಿರುವ ಮೊಬೈಲ್ ಸಂಭಾಷಣೆಯ ಆಡಿಯೋ ಇದಕ್ಕೆಲ್ಲ ಪುಷ್ಠಿ ನೀಡಿದೆ. ಈ ನಡುವೆ, ಯುವಕ ಪ್ರಯಾಣಿಸಿದ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ತಪಾಸಣೆಗೆ ಹಾಜರಾಗಲು ಸೂಚಿಸಲಾಗಿದೆ. ಉಡುಪಿ ಜಿಲ್ಲೆಯ 23 ಮಂದಿ ಈ ಪಟ್ಟಿಯಲ್ಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಮಂಗಳೂರಿನ ಆಸ್ಪತ್ರೆಗಳಲ್ಲಿರುವ ಕಾಸರಗೋಡಿನ ನಾಲ್ವರಿಗೆ ಕರೊನಾ ಪಾಸಿಟಿವ್ ಇರುವ ಮಾಹಿತಿ ಮಂಗಳವಾರ ಬಂದಿದೆ. ಇವರಲ್ಲಿ ಇಬ್ಬರು ಕರೊನಾ ಪಾಸಿಟಿವ್ ದೃಢಗೊಂಡ ಭಟ್ಕಳ ನಿವಾಸಿಯ ಜತೆ ದುಬೈಯಿಂದ ವಿಮಾನದಲ್ಲಿ ಆಗಮಿಸಿದವರು. ಇನ್ನೊಬ್ಬ ಬೇರೆ ವಿಮಾನದಲ್ಲಿ ದುಬೈಯಿಂದ ಆಗಮಿಸಿದವನು. ಈಗ ಇವರ ಜತೆ ವಿಮಾನಗಳಲ್ಲಿ ಪ್ರಯಾಣಿಸಿದವರನ್ನು ಗುರುತಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಇನ್ನು ಉತ್ತರ ಕನ್ನಡದಲ್ಲಿ ಮಂಗಳವಾರ ಇಬ್ಬರಿಗೆ ಕರೊನಾ ಪಾಸಿಟಿವ್ ಖಚಿತಗೊಂಡಿದೆ. ಆ ಇಬ್ಬರೂ ಮಂಗಳೂರಿನ ಜತೆ ಸಂಪರ್ಕ ಹೊಂದಿದ್ದರು. ಮಾರ್ಚ್ 21ಕ್ಕೆ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ 40 ವರ್ಷದ ಭಟ್ಕಳ ನಿವಾಸಿ ಪುರುಷ, ತಮ್ಮದೇ ವಾಹನದಲ್ಲಿ ಸಹೋದರ ಸಂಬಂಧಿ ಜೊತೆ ಭಟ್ಕಳದ ಮನೆಗೆ ಬಂದಿದ್ದರು.

ಇನ್ನೋರ್ವ 65 ವರ್ಷ ವಯಸ್ಸಿನ ಭಟ್ಕಳ ನಿವಾಸಿ ದುಬೈನಿಂದ ಮಾ.19ರಂದು ಮುಂಬೈಗೆ ಬಂದು, ಅಲ್ಲಿಂದ ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಭಟ್ಕಳ ತಲುಪಿದ್ದರು. ಈ ರೈಲು ಮಂಗಳೂರಿಗೆ ತಲುಪಿಲ್ಲವಾದರೂ, ರೈಲಿನಲ್ಲಿ ಮಂಗಳೂರಿನವರೂ ಸಾಕಷ್ಟು ಮಂದಿ ಇದ್ದರೆಂಬುದು ಗಮನಾರ್ಹ.

ಕಾಸರಗೋಡು ನಿವಾಸಿ ನಗರ ಪ್ರದಕ್ಷಿಣೆ: ಕಾಸರಗೋಡಿನ 54 ವರ್ಷ ವಯಸ್ಸಿನ ಸೋಂಕಿತ ವ್ಯಕ್ತಿಯೊಬ್ಬರು ಮಂಗಳೂರಿಗೆ ಎರಡು ಬಾರಿ ಬಂದು ಹೋಗಿದ್ದಲ್ಲದೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಿದ್ದಾರೆ. ಸೋಂಕು ದೃಢಪಟ್ಟ ಬೆನ್ನಲ್ಲೇ ಕೇರಳ ಸರ್ಕಾರ ಆತ ಸಂಚರಿಸಿದ ರೂಟ್ ಮ್ಯಾಪ್ ಬಿಡುಗಡೆಗೊಳಿಸಿದ್ದು, ಆತ ಸಂಚರಿಸಿದ ಮಾರ್ಗಗಳಲ್ಲಿನ ಸಾರ್ವಜನಿಕರು ಕೂಡಲೆ ಆರೋಗ್ಯ ಇಲಾಖೆಗೆ ಸ್ವಯಂ ಪ್ರೇರಣೆಯಿಂದ ಮಾಹಿತಿ ನೀಡುವಂತೆ ಕೋರಿದೆ.

ಈ ವ್ಯಕ್ತಿ ಮಾ.10ರಂದು ಸಂಜೆ 5.30ರ ಏರ್‌ಇಂಡಿಯಾ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಲ್ಲಿಂದ ಸ್ವಂತ ವಾಹನದಲ್ಲಿ ಕಾಸರಗೋಡಿಗೆ ತೆರಳಿ ಅಲ್ಲಿ ಚಹಾ ಸೇವನೆ ಮಾಡಿ ರಾತ್ರಿ 7.30ಕ್ಕೆ ಮನೆಗೆ ತೆರಳಿದ್ದರು. ಮಾ.18ರಂದು ಅಪರಾಹ್ನ 3 ಗಂಟೆಗೆ ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆಗೆ ಹೋಗಿ ವೈದ್ಯರೊಬ್ಬರನ್ನು ಭೇಟಿಯಾಗಿದ್ದರು. ಬಳಿಕ ಕೆಎಂಸಿ ಕ್ಯಾಂಟೀನ್‌ಗೆ ಬಂದು ಚಹಾ ಸೇವನೆ ಮಾಡಿದ್ದರು. ಅಲ್ಲಿಂದ ಆಟೋ ರಿಕ್ಷಾದಲ್ಲಿ ‘ಮೆಡಿಸಿಟಿ’ಗೆ ತೆರಳಿ ಔಷಧಿಗಳನ್ನು ಕೊಂಡು ಕಾಸರಗೋಡಿಗೆ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ತೆರಳಿದ್ದರು. ಮಾ.20ರಂದು ಅದೇ ವ್ಯಕ್ತಿ ಮತ್ತೆ ಮಂಗಳೂರಿಗೆ ಆಗಮಿಸಿದ್ದಾನೆ. ಖಾಸಗಿ ವಾಹನದಲ್ಲಿ ಮಂಗಳೂರಿಗೆ ಬಂದು ವೈದ್ಯರನ್ನು ಭೇಟಿಯಾಗಿ ಅದೇ ವಾಹನದಲ್ಲಿ ವಾಪಸ್ ಕಾಸರಗೋಡಿಗೆ ತೆರಳಿದ್ದಾರೆ. ಈ ಸೋಂಕಿತ ವ್ಯಕ್ತಿ ಸಂಚರಿಸಿದ ವಿಮಾನ, ಬಸ್ಸುಗಳಲ್ಲಿನ ಪ್ರಯಾಣಿಕರು ಸ್ವಯಂ ಪ್ರೇರಣೆಯಿಂದ 104 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net