ವಲಸೆ ಕಾರ್ಮಿಕರಿಗೆ ಕೆಲಸವಿಲ್ಲದೆ ಸಂಕಷ್ಟ

Labour
Published on

ಮಂಗಳೂರು: ಕರೊನಾ ಎರಡನೇ ಅಲೆಯಲ್ಲಿ ವಾರಕ್ಕೆ ಎರಡು ದಿನ ಕೆಲಸ ಸಿಗುವುದೇ ಕಷ್ಟ. ಮನೆ ಬಾಡಿಗೆ ಕೊಟ್ಟು ಜೀವನ ನಿರ್ವಹಣೆಯೂ ಕಷ್ಟವಾಗಿದೆ. ಕೆಲಸಕ್ಕೆ ಕರೆದೊಯ್ಯುವವರೇ ಇಲ್ಲ. ಕೆಲಸ ಇದ್ದರೆ ಕೊಡಿ ಎಂದು ಚೀಲ ಹಿಡಿದುಕೊಂಡು ನೂರಾರು ಕಾರ್ಮಿಕರು ಅಂಗಲಾಚುವ ದೃಶ್ಯ ಮಂಗಳೂರಿನಲ್ಲಿ ಸಾಮಾನ್ಯ.

ಉರ್ವಸ್ಟೋರ್, ಕಾವೂರು, ಕೂಳೂರು, ಬೈಕಂಪಾಡಿ, ಕುಳಾಯಿ, ತೊಕ್ಕೊಟ್ಟು ಮೊದಲಾದ ಕಡೆ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರು ಕೆಲಸ ಕೊಡುವ ಕೈಗಳಿಗೆ ಹಾತೊರೆಯುತ್ತಾರೆ. ಈ ಜಾಗಗಳೇ ಅವರಿಗೆ ಬದುಕು ಕಟ್ಟಿ ಕೊಡುವ ತಾಣ. ಬೆಳಗ್ಗೆ 8ಕ್ಕೆ ಬಂದು ನಿಲ್ಲುವ ಇವರು 9 ಗಂಟೆ ತನಕ ಕಾಯುತ್ತಾರೆ. ಅದರ ಮಧ್ಯೆ ಯಾರಾದರೂ ಕರೆದೊಯ್ದರೆ ಕೆಲಸ. ಇಲ್ಲದಿದ್ದರೆ ಜೋಪಡಿಗೆ ವಾಪಸ್. ಮರುದಿನ ಮತ್ತೆ ಅದೇ ಜಾಗದಲ್ಲಿ ಕೆಲಸಕ್ಕಾಗಿ ಕಾಯುತ್ತಾರೆ. ನಗರ ವ್ಯಾಪ್ತಿಯಲ್ಲಿ ಮನೆ ಅಥವಾ ಇತರ ಕಡೆ ಕೆಲಸಕ್ಕೆ ಜನ ಬೇಕಾದರೆ ಮಾಲೀಕರಾದವರು ಈ ಜಾಗಗಳಿಗೆ ಹುಡುಕಿಕೊಂಡು ಬರುತ್ತಾರೆ. ಅಲ್ಲಿಗೆ ಬಂದವರು ತಮಗೆ ಎಷ್ಟು ಜನ ಜನ ಬೇಕೋ ಕರೆದೊಯ್ಯುತ್ತಾರೆ.

ಇಲಾಖೆಯಿಂದ ಸೌಲಭ್ಯವಿಲ್ಲ: ಕಾರ್ಮಿಕ ನಿಯಮದಂತೆ ಹೊರಜಿಲ್ಲೆ ಅಥವಾ ರಾಜ್ಯಗಳಿಂದ ಬರುವ ಕಾರ್ಮಿಕರು ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ ವಲಸೆ ಕಾರ್ಮಿಕರಾಗಿ ಜಿಲ್ಲೆಯನ್ನು ಆಶ್ರಯಿಸಿದವರು ಹೆಚ್ಚಾಗಿ ಒಂದೇ ಕಂಪನಿಯಲ್ಲಿ ಕಾಯಂ ಕೆಲಸ ಮಾಡುವುದಿಲ್ಲ. ಇಲಾಖೆಯಲ್ಲಿ ನೋಂದಣಿಯಾಗದ ಕಾರಣ ಸರ್ಕಾರದ ಸವಲತ್ತುಗಳಿಂದಲೂ ವಂಚಿತರಾಗುತ್ತಿದ್ದಾರೆ. ಹೀಗಾಗಿ ವಲಸೆ ಕಾರ್ಮಿಕರಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳು ಸಿಗುತ್ತಿಲ್ಲ.

ಮಂಗಳೂರಿಗೆ ಏಕೆ ಬರುತ್ತಾರೆ?: ಉತ್ತರ ಕರ್ನಾಟಕದಿಂದ ಬರುವ ವಲಸೆ ಕಾರ್ಮಿಕರು ಹೆಚ್ಚಾಗಿ ಯಾವುದೇ ತರಹದ ಕೆಲಸದಲ್ಲಿ ನೈಪುಣ್ಯ ಹೊಂದಿರುವುದಿಲ್ಲ. ಆದರೆ ಯಾವುದೇ ಕೆಲಸ ಮಾಡಲು ಸಿದ್ಧರಿರುತ್ತಾರೆ. ಈ ಕಾರಣಕ್ಕೆ ಹೆಚ್ಚು ಪರಿಣತಿ ಬೇಕಿರದ ಕೆಲಸಗಳಾದ ಕಳೆ ಕೀಳುವುದು, ಸ್ವಚ್ಛತೆ, ಗಾರೆ ಕೆಲಸಕ್ಕೆ ಸಹಾಯಕರಾಗಿ, ಪೈಪ್ ಹಾಕಲು ಮಣ್ಣು ಅಗೆಯಲು ಮೊದಲಾದ ಕೆಲಸಗಳಿಗೆ ಇವರನ್ನು ಬಳಸಿಕೊಳ್ಳಲಾಗುತ್ತಿದೆ. ಬೇರೆ ಕೂಲಿ ಕಾರ್ಮಿಕರು ದಿನಕ್ಕೆ 500ರಿಂದ 600 ರೂ. ಬೇಡಿಕೆ ಸಲ್ಲಿಸಿದರೆ ವಲಸೆ ಕಾರ್ಮಿಕರಿಗೆ 400-450 ರೂ. ಕೊಟ್ಟರೆ ಸಾಕು. ಊರಿನಿಂದ ಬಂದ ಮಹಿಳಾ ಕೆಲಸಗಾರರಿಗೆ 250-300 ರೂ. ಕೊಟ್ಟರೂ ಸಾಕಾಗುತ್ತದೆ. ಹಾಗಾಗಿ ಮಂಗಳೂರಿಗರು ಸಣ್ಣ ಪುಟ್ಟ ಕೆಲಸಗಳಿಗೆ ವಲಸೆ ಕಾರ್ಮಿಕರನ್ನೇ ನೆಚ್ಚಿಕೊಂಡಿದ್ದಾರೆ.

ಎರಡು ತಿಂಗಳಿನಿಂದ ಕೆಲಸ ಸಿಗುತ್ತಿಲ್ಲ. ಊರಿಗೆ ಹೋಗೋಣ ಅಂದ್ರೆ ಬಸ್‌ಗಳು ಇಲ್ಲ. ಮನೆ ಬಾಡಿಗೆ ಕೊಟ್ಟು ಜೀವನ ನಡೆಸೋದು ಕಷ್ಟವಾಗಿದೆ. ಸರ್ಕಾರದಿಂದ ನಮಗೇನೂ ಸಿಕ್ಕಿಲ್ಲ.

ಮಲ್ಲಿಕಾರ್ಜುನ, ಗದಗದ ವಲಸೆ ಕಾರ್ಮಿಕ

ಊರಿನಲ್ಲಿ ಜಮೀನು ಇದೆ. ಮಳೆ ಇಲ್ಲದಿದ್ದರೆ ಬೆಳೆ ಮಾಡಲು ಆಗುವುದಿಲ್ಲ. ಕೂಲಿ ಕೆಲಸಕ್ಕಾಗಿ ಇಲ್ಲಿಗೆ ವಲಸೆ ಬಂದಿದ್ದೇವೆ. ಕರೊನಾದಿಂದಾಗಿ ಕೆಲಸ ಮಾಡಿಸುವವರೇ ಇಲ್ಲದಂತಾಗಿದೆ. ಇದರಿಂದ ನಮ್ಮ ಕುಟುಂಬ ಸಲಹುವುದೇ ಕಷ್ಟವಾಗಿದೆ.

ಗದ್ಯಪ್ಪ, ಬಾದಾಮಿಯ ವಲಸೆ ಕಾರ್ಮಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net