

ಮಂಗಳೂರು : ಮಂಗಳೂರು-ಕಬಕ-ಪುತ್ತೂರು ಪ್ಯಾಸೆಂಜರ್ ರೈಲು ಸಂಚಾರವನ್ನು ಸುಬ್ರಹ್ಮಣ್ಯ ಜಂಕ್ಷನ್‌ಗೆ ವಿಸ್ತರಿಸುವುದಕ್ಕೆ ರೈಲ್ವೆ ಮಂಡಳಿ ಈಗಾಗಲೇ ಮಂಜೂರಾತಿ ನೀಡಿದ್ದು, ರೈಲ್ವೆ ಸಚಿವ ವಿ. ಸೋಮಣ್ಣ ಅವರ ದಿನಾಂಕ ನಿಗದಿಪಡಿಸಿಕೊಂಡು ಮಾರ್ಚ್ ಅಂತ್ಯದೊಳಗೆ ಈ ರೈಲು ಸೇವೆಗೆ ಚಾಲನೆ ನೀಡಲಾಗುತ್ತದೆ ಎಂದು ದ.ಕ.ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಬುಧವಾರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾದ ಕ್ಯಾ. ಚೌಟ ಅವರು, ಕಳೆದ ಒಂದು ದಶಕದಿಂದ ಬೇಡಿಕೆ ಉಳಿದಿದ್ದ ಮಂಗಳೂರು-ಕಬಕ-ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರಸ್ತೆಗೆ ವಿಸ್ತರಿಸುವ ಐತಿಹಾಸಿಕ ನಿರ್ಧಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಸಂಸದನಾಗಿಮೊದಲ ಅಧಿವೇಶನದಲ್ಲೇ ಕರಾವಳಿಯ ರೈಲು ಪ್ರಯಾಣಿಕರ ಈ ಬೇಡಿಕೆಯನ್ನು ಲೋಕಸಭೆಯಲ್ಲಿ
ಪ್ರಸ್ತಾಪಿಸಿದ್ದೆ ಆ ಬಳಿಕ ಸಚಿವಾಲಯ ಹಾಗೂ ರೈಲ್ವೆ ಅಧಿಕಾರಿಗಳ ಜತೆ ನಿರಂತರ ಫಾಲೋಅಪ್ ಮಾಡಿರುವುದರ ಪರಿಣಾಮ ಜಿಲ್ಲೆಯ ಜನತೆಯ ದಶಕದ ಕನಸು ನನಸಾಗುವ ದಿನಗಳು ಸನ್ನಿಹಿತವಾಗಿವೆ ಎಂದು ಸಂಸದ ಕ್ಯಾ. ಚೌಟ ತಿಳಿಸಿದ್ದಾರೆ.