ಯಕ್ಷಗಾನ ಕಲಾಶ್ರಯ ಬಯಸುವ ಜೀವಂತ ಕಲೆ- ಕುಡುಪು ಯಕ್ಷಮಿತ್ರರಿಂದ ನಡೆದ ಯಕ್ಷಗಾನ ಸಂದರ್ಭ ಮಾಜಿ ಸಚಿವ ಅಭಯಚಂದ್ರ ಜೈನ್

mng--14 Dec Kudupu
Published on

ಮಂಗಳೂರು: ಯಕ್ಷಗಾನವು ಕಲಾಶ್ರಯ ಬಯಸುವ ಜೀವಂತ ಕಲೆ. ಅನೇಕ ಕಲಾವಿದರನ್ನು ರಂಗಸ್ಥಳಕ್ಕೆ ಪರಿಚಯಿಸುತ್ತದೆ. ಕಲಾವಿದರಲ್ಲಿನ ಸಂಪೂರ್ಣ ಪ್ರತಿಭೆಯನ್ನು ಹೊರಹಾಕಬಲ್ಲ ಸ್ವತಂತ್ರ ಕಲೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.

ಕುಡುಪು ಶ್ರೀ ಅನಂತ ಪದ್ಮನಾಭ ಕ್ಷೇತ್ರದಲ್ಲಿ ನಡೆದ ಷಷ್ಠಿ ಮಹೋತ್ಸವದ ಸಂದರ್ಭ ಕುಡುಪು ಯಕ್ಷಮಿತ್ರರಿಂದ ನಡೆದ ಯಕ್ಷಗಾನ ಸಂದರ್ಭ ಅವರು ಮಾತನಾಡಿದರು.

ಸಂಪ್ರದಾಯದಂತೆ ಒಬ್ಬ ಶ್ರೇಷ್ಠ ಕಲಾವಿದನನ್ನು ಗೌರವಿಸಿ-ಸನ್ಮಾನಿಸಿರುವುದು ಶ್ಲಾಘನೀಯ. ಇದು ಈ ಕ್ಷೇತ್ರದ ಪ್ರಸಾದ. ಸಂಸ್ಥೆಯ ಉನ್ನತಿಗೂ ಇದು ಕಾರಣವಾಗುತ್ತದೆ ಎಂದವರು ಹೇಳಿದರು.

ಕಲಾವಿದ ಸರವು ರಮೇಶ್ ಭಟ್ ಅವರನ್ನು ಸನ್ಮಾನಿಸಲಾಯಿತು. ತಾನು ಕಟೀಲಿನ ಮೇಳದಲ್ಲಿ 35 ವರ್ಷಕ್ಕೂ ಮಿಕ್ಕಿ ತಿರುಗಾಟಗಳನ್ನು ನಡೆಸಿದ್ದೇನೆ. ನಿರಂತರ ಯಕ್ಷಯಾನ ಮತ್ತು ಮಹಾನ್ ಕಲಾವಿದರ ಒಡನಾಟ ನನಗೆ ತುಂಬಾ ಹೆಸರನ್ನು ತಂದುಕೊಟ್ಟಿದೆ. ಇಂದು ಕುಡುಪು ವಿನ ಯಕ್ಷ ಮಿತ್ರರು ನನ್ನನ್ನು ಗುರುತಿಸಿ ಸನ್ಮಾನಿಸಿದ್ದಾರೆ. ಅತ್ಯಂತ ಪ್ರೀತಿಪೂರ್ವಕವಾಗಿ ಸ್ವೀಕರಿಸಿದ್ದೇನೆ ಎಂಧರು.

ಕ್ಷೇತ್ರದ ಆನುವಂಶಿಕ ಮೊಕ್ತೇಸರ ವೇ. ಮೂ. ಕೆ. ನರಸಿಂಹ ತಂತ್ರಿ ಉಪಸ್ಥಿತರಿದ್ದರು. ಕುಡುಪು ಶ್ರೀ ಕೃಷ್ಣರಾಜ ತಂತ್ರಿ ಅವರು ಪ್ರಸ್ತಾವನೆಗೈದರು. ಕುಡುಪುವಿನ ಜನಾರ್ಧನ ಕೆ., ವಾಮಂಜೂರು ಅಮೃತೇಶ್ವರ ದೇವಸ್ಥಾನದ ಚಂದ್ರಹಾಸ ರೈ, ಪದ್ಮರಾಜ್ ಎಕ್ಕಾರ್, ಸುಧಾಕರ ರಾವ್ ಪೇಜಾವರ್ ಅತಿಥಿಗಳಾಗಿದ್ದರು.

ಯಕ್ಷಗುರು ’ಕಲಾವಿದ ವರ್ಕಾಡಿ ರವಿ ಅಲೆವೂರಾಯ ಅಭಿನಂದನಾ ಭಾಷಣ ಮಾಡಿದರು. ಕುಡುಪು ರಾಘವೇಂದ್ರ ಭಟ್ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಕುಡುಪು ವಾಸುದೇವ ರಾವ್ ನಿರ್ವಹಿಸಿದರು. ಸಭೆಯ ಬಳಿಕ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ, ಯಕ್ಷಮಿತ್ರರು ಕುಡುಪುರವರ ನೇತೃತ್ವದಲ್ಲಿ ಇಂದ್ರಜಿತು ಕಾಳಗ ಎಂಬ ಯಕ್ಷಗಾನ ಬಯಲಾಟ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net