

ವಿಜಯವಾಣಿ ಸುದ್ದಿಜಾಲ ಮಂಗಳೂರು
ಶ್ರೀ ವಿದ್ಯಾಗಣಪತಿ ಸೇವಾ ಟ್ರಸ್ಟ್ ವತಿಯಿಂದ ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿರುವ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಭಾನುವಾರ ದೇರೆಬೈಲು ಬ್ರಹ್ಮಶ್ರೀ ವಿಠಲದಾಸ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಿತು.
ಮುಂಜಾನೆಯಿಂದ ಪುಣ್ಯಾಹ, ಪ್ರತಿಷ್ಟಾ ಹೋಮ, ಅಷ್ಟಬಂಧ ಲೇಪನ, ಪ್ರಧಾನ ಹೋಮ, 108 ಕಲಶಾಧಿವಾಸ, 108 ತೆಂಗಿನ ಕಾಯಿ ಗಣಹೋಮ, ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ಜರುಗಿತು.
ಮಧ್ಯಾಹ್ನ ದಿಂದ ಸಾಯಂಕಾಲ ತನಕ 3000 ಕ್ಕೂ ಅಧಿಕ ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ರಾತ್ರಿ ಹಿರಿಯಡ್ಕ ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ‘ಕಾರ್ತ ವೀರ್ಯಾರ್ಜುನ- ಭಾರ್ಗವ ವಿಜಯ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಶನಿವಾರ ಸಂಜೆ ತೋರಣ ಮುಹೂರ್ತ, ಸಪ್ತಪದಿ, ವಾಸ್ತು ರಾಕ್ಷೋಘ್ನ ಹೋಮ, ದಿಕ್ಪಾಲ ಬಲಿ, ಅನುಜ್ಞಾ ಕಲಶ, ಬಿಂಬ ಶುದ್ಧಿ, ನಾಳಶೋಧನೆ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ಜರಗಿದವು.
ಮೇಯರ್ ಭೇಟಿ: ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಕದ್ರಿ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜೆ.ಶೆಟ್ಟಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಸಹಿತ ಹಲವು ಗಣ್ಯರು ಸ್ಥಳಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.