

ಮಂಗಳೂರು ಹಲವು ಊರುಗಳಿಗೆ ಪ್ರಮುಖ ಸಂಪರ್ಕ ಕೇಂದ್ರ. ಕರೊನಾ ವೈರಸ್ ತಡೆ ಹಿನ್ನೆಲೆಯಲ್ಲಿ ಜನಸಂಚಾರ ಹೆಚ್ಚಿರುವ ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಆರೋಗ್ಯ ತಪಾಸಣೆ ವ್ಯವಸ್ಥೆ ಹೇಗಿದೆ ಎಂಬ ಬಗ್ಗೆ ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್ ಇಲ್ಲಿದೆ.
ಮಂಗಳೂರು: ನಗರದ ಬಿಜೈನಲ್ಲಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ನಿಲ್ದಾಣ ಖಾಲಿ ಖಾಲಿಯಾಗಿವೆ. ಶನಿವಾರದಿಂದ ಕಾಸರಗೋಡಿಗೆ ಸಂಚರಿಸುವ ಕೆಎಸ್ಸಾರ್ಟಿಸಿ ಬಸ್‌ಗಳೂ ಬಂದ್ ಆಗಿರುವುದರಿಂದ ಬೆರಳೆಣಿಕೆ ಬಸ್‌ಗಳು ಮಾತ್ರ ನಿಲ್ದಾಣದಲ್ಲಿ ನಿಂತಿವೆ. ಸಂಚಾರ ಸ್ಥಗಿತಗೊಳಿಸಿರುವ ಬಸ್‌ಗಳನ್ನು ಡಿಪೋದಲ್ಲಿ ನಿಲ್ಲಿಸಲಾಗಿದೆ.
ವಿವಿಧ ಪ್ರದೇಶಗಳ ಪ್ರಯಾಣಿಕರು ನಿಲ್ದಾಣಕ್ಕೆ ಬರುತ್ತಾರಾದರೂ, ತಪಾಸಣೆಗೆ ಯಾವುದೇ ವ್ಯವಸ್ಥೆಯಿಲ್ಲ. ಕೇವಲ ಪೊಲೀಸ್ ಮತ್ತು ಹೋಂಗಾರ್ಡ್ ಸಿಬ್ಬಂದಿಯನ್ನು ನಿಲ್ಲಿಸಲಾಗಿದ್ದು, ಅವರು ಜನರನ್ನು ಗುಂಪು ಸೇರದಂತೆ ತಡೆಯುತ್ತಿದ್ದಾರೆ. ಶನಿವಾರ ವಿದೇಶಿ ವ್ಯಕ್ತಿಯೊಬ್ಬರು ನಿಲ್ದಾಣಕ್ಕೆ ಆಗಮಿಸಿದ್ದು, ಯಾರು, ಏನು ಎಂದು ಅಲ್ಲಿರುವವರು ಯಾರೂ ಕೇಳಿಲ್ಲ. ನಿಲ್ದಾಣದೊಳಕ್ಕೆ ಪ್ರವೇಶಿಸಿ ಬಳಿಕ ಹೊರಟು ಹೋಗಿದ್ದಾರೆ.
ಖಾಸಗಿ ಬಸ್ ನಿಲ್ದಾಣದಲ್ಲಿ ಕೇಳುವವರೇ ಇಲ್ಲ
ಸ್ಟೇಟ್‌ಬ್ಯಾಂಕ್ ಬಳಿಯ ಸಿಟಿ ಮತ್ತು ಪ್ರೈವೇಟ್ ಬಸ್ ನಿಲ್ದಾಣದಲ್ಲಿ ಯಾರೂ ಕೇಳುವವರಿಲ್ಲ. ತೆರೆದ ಸ್ಥಳವಾಗಿರುವುದರಿಂದ ಎಲ್ಲೆಡೆಗಳಿಂದ ಜನರು ಬಂದು ಬಸ್‌ಗಳಲ್ಲಿ ತೆರಳುತ್ತಾರೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಕೆಲವು ಬಸ್‌ಗಳ ಸಂಚಾರ ಕಡಿತಗೊಳಿಸಲಾಗಿದೆ. ಇಲ್ಲಿ ಯಾರನ್ನೂ ತಪಾಸಣೆಯಾಗಲೀ, ವಿಚಾರಿಸುವುದಾಗಲೀ ಮಾಡುತ್ತಿಲ್ಲ.
ರೈಲು ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಸ್ಕ್ರೀನಿಂಗ್
ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ರೈಲು ನಿಲ್ದಾಣಗಳಲ್ಲಿ ತಪಾಸಣೆ ಮತ್ತಷ್ಟು ಕಟ್ಟುನಿಟ್ಟುಗೊಳಿಸಲಾಗಿದೆ.
ನಿಲ್ದಾಣ ಪ್ರವೇಶಿಸಲು ಇರುವ ಒಳದಾರಿಗಳನ್ನೆಲ್ಲ ಬಂದ್ ಮಾಡಲಾಗಿದ್ದು, ಎಸ್ಕಲೇಟರ್ ಆಫ್ ಮಾಡಲಾಗಿದೆ. ಮುಖ್ಯದ್ವಾರದಲ್ಲಿ ಮಾತ್ರ ಒಳಗೆ-ಹೊರಗೆ ಹೋಗಲು ಅವಕಾಶ ನೀಡಲಾಗಿದೆ. ಫ್ಲಾಟ್‌ಫಾರಂ ಪ್ರವೇಶಿಸುವ ನಿರ್ಗಮಿಸುವ ಎಲ್ಲ ಪ್ರಯಣಿಕರನ್ನು ಥರ್ಮಲ್ ಗನ್ ಮೂಲಕ ಪರೀಕ್ಷಿಸಲಾಗುತ್ತಿದೆ.
ರೈಲು ಸೇವೆ ಬಂದ್ ಹಾಗೂ ಕರೊನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಮಂಗಳೂರಿಗೆ ಸಂಬಂಧಿಸಿದ ವಿವಿಧ ರೈಲು ನಿಲ್ದಾಣಗಳ ಎಲ್ಲ ಉನ್ನತ ಹಿರಿಯ ಅಧಿಕಾರಿಗಳು ಸಭೆ ನಡೆಸಿದರು. ಈ ವೇಳೆ ರೈಲುಗಳಲ್ಲೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಂಚರಿಸಿ ಸೇವೆ ನೀಡಬೇಕು ಎಂದು ಮನವಿ ಮಾಡಲು ನಿರ್ಧರಿಸಲಾಗಿದೆ.
ರೈಲು ಸಂಚಾರ ಸ್ಥಗಿತ
ಶನಿವಾರ ಸಾಯಂಕಾಲದಿಂದಲೇ ಎಲ್ಲ ರೈಲುಗಳು ಸಂಚಾರ ಸ್ಥಗಿತಗೊಂಡಿದ್ದು, ಭಾನುವಾರ ಮುಂಜಾನೆ 4ರಿಂದ ಪ್ಯಾಸೆಂಜರ್ ರೈಲುಗಳ ಸಂಚಾರ ಬಂದ್ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಬಂದ್ ಇರಲಿದೆ. ಜತೆಗೆ ಸ್ಟೇಷನ್‌ನಲ್ಲಿ ನೀರು ಮತ್ತು ಬಿಸ್ಕೆಟ್ ಹೊರತುಪಡಿಸಿ ಬೇರಾವುದೇ ಆಹಾರ ಸಿಗುವುದಿಲ್ಲ ಎಂದು ಸ್ಟೇಷನ್ ಮಾಸ್ಟರ್ ಕಿಶನ್ ತಿಳಿಸಿದ್ದಾರೆ.
ಪ್ರಯಾಣಿಕರ ತಪಾಸಣೆ
ರೈಲು ನಿಲ್ದಾಣದಲ್ಲಿ ಮಾ.19ರಂದು 4113 ಮಂದಿ ಹಾಗೂ ಮಾ.20ರಂದು 3720 ಮಂದಿಯನ್ನು ಥರ್ಮಲ್ ಗನ್ ಮೂಲಕ ದೇಹದ ತಪಾಸಣೆ ನಡೆಸಲಾಗಿದೆ. ಈ ವೇಳೆ ಜ್ವರದಿಂದ ಬಳಲುತ್ತಿರುವವರು ಪತ್ತೆಯಾದಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಇಲ್ಲಿವರೆಗೆ ಕರೊನಾ ಲಕ್ಷಣ ಹೊಂದಿರುವವರು ಪತ್ತೆಯಾಗಿಲ್ಲ. ನಿಲ್ದಾಣದಲ್ಲಿ ವೈರಸ್ ನಿವಾರಕ ದ್ರಾವಣ ಪ್ರಮುಖ ಸ್ಥಳಗಳಲ್ಲಿ ಸಿಂಪಡಿಸುವ ಮೂಲಕ ಸೋಂಕು ಹರಡದಂತೆ ತಡೆಯಲಾಗುತ್ತಿದೆ.