

ಮಂಗಳೂರು: ಉಳ್ಳಾಲ ತಾಲೂಕಿನ ಹರೇಕಳ ಮತ್ತು ಅಂಬ್ಲಮೊಗರು ಗ್ರಾಮಳ ವ್ಯಾಪ್ತಿಗೊಳಪಡುವ ಕೊಟ್ಟಾರ ಕುದ್ರು, ಗಟ್ಟಿಕುದ್ರು ದ್ವೀಪಗಳಲ್ಲಿ ಅಕ್ರಮ ಮರಳುಗಾರಿಕೆಯಿಂದ ಉಭಯ ದ್ವೀಪಗಳು ಕೊಚ್ಚಿ ಹೋಗುವ ಸ್ಥಿತಿ ಇದೆ. ಇಲ್ಲಿನ ಜನತೆ ಭಯದಿಂದ ಜೀವನ ನಡೆಸುವಂತಾಗಿದೆ ಎಂದು ಉಭಯ ದ್ವೀಪಗಳ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಓಸ್ವಾಲ್ಡ್ ಫುರ್ಟಾಡೋ ಹೇಳಿದರು.
ಮಲ್ಲಿಕಟ್ಟೆಯಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಚೇರಿ ಎದುರು ಮಂಗಳವಾರ ಆಯೋಜಿಸಲಾದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಸುಮಾರು 40 ರಷ್ಟು ಕುಟುಂಬಗಳು ಈ ದ್ವೀಪಗಳಲ್ಲಿ ತಲೆಮಾರುಗಳಿಂದ ವಾಸವಾಗಿದ್ದು, ಈಗಾಗಲೇ ಅಕ್ರಮ ಮರಳುಗಾರಿಕೆಯಿಂದ ದ್ವೀಪಗಳ ಅರ್ಧ ಭಾಗವೇ ಮಾಯವಾಗಿದೆ. ಅನುಮತಿ ಇಲ್ಲದೆ ನಡೆಯುತ್ತಿರುವ ಮರಳುಗಾರಿಕೆಯನ್ನು ನಿಲ್ಲಿಸಿ ಸ್ಥಳೀಯರನ್ನು ಭಯಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ಗೌರವ ಸಲಹೆಗಾರ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಹರೇಕಳದ ಉಭಯ ದ್ವೀಪಗಳಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆಕೋರರನ್ನು ಬೆನ್ನಟ್ಟಿ ತಡೆಯುವ ಕೆಲಸ ಹೋರಾಟದ ಮೂಲಕ ನಡೆಯಬೇಕು. ನಿಯಮ ಉಲ್ಲಂಘಿಸಿ ಮರಳುಗಾರಿಕೆ ನಡೆಸುತ್ತಿರುವ ಶಕ್ತಿಗಳನ್ನು ಬಯಲಿಗೆಳೆಯಲು ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಕೊಟ್ಟಾರಿ ಕುದ್ರು, ಗಟ್ಟಿ ಕುದ್ರುವಿನ ನಾಗರಿಕರ ಹೋರಾಟದಲ್ಲಿ ಜನಪರ ಸಂಘಟನೆಗಳು ಜತೆಯಾಗಿದ್ದು, ಅಕ್ರಮ ಮರಳುಗಾರಿಕೆ ನಿಲ್ಲುವವರೆಗೆ ಹೋರಾಟ ಮುಂದುವರಿಯಲಿದೆ. ಮರಳು ದಂಧೆಕೋರರನ್ನು ಗೂಂಡಾ ಕಾಯ್ದೆಗೊಳಪಡಿಸಿ ಗಡಿಪಾರು ಮಾಡಬೇಕು ಎಂದು ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದರು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ತಲಿನೋ ಮಾತನಾಡಿ, ಅಕ್ರಮ ಮರಳುಗಾರಿಕೆ ನಡೆಸುವವರು ದಂಧೆಕೋರರು ಮಾತ್ರವಲ್ಲ. ಅವರು ದರೋಡೆಕೋರರಾಗಿದ್ದು, ಅವರಿಗೆ ಯಾರ ಅನುಮತಿಯೂ ಬೇಕಾಗಿಲ್ಲ. ಉಳಿಯದಲ್ಲಿ ಬೇರು ಬಿಟ್ಟಿದ್ದ ಈ ದಂಧೆಕೋರರು ಇದೀಗ ಕೊಟ್ಟಾರಿ ಕುದ್ರು ಹಾಗೂ ಗಟ್ಟಿ ಕುದ್ರುವಿನಲ್ಲಿ ತಮ್ಮ ಉದ್ಯಮ ವಿಸ್ತರಿಸಿದ್ದಾರೆ ಎಂದರು.
ಕ್ಯಾಥೊಲಿಕ್ ಸಭಾದ ಉಪಾಧ್ಯಕ್ಷ ಸ್ಟೀವನ್ ರಾಡ್ರಿಗಸ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನೀತಾ ಡಿಸೋಜ, ಸ್ಥಳೀಯರಾದ ಕಿಶೋರ್ ಡಿಸೋಜ, ಜಿಲ್ಲಾ ಕಾರ್ಮಿಕ ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ರಫೀಕ್ ಹರೇಕಳ, ಯುವಜನ ನಾಯಕರಾದ ರಿಜ್ವಾನ್ ಹರೇಕಳ, ಮಹಿಳಾ ಮುಖಂಡರಾದ ಅಸುಂತ ಡಿಸೋಜ, ಪ್ರಮೋದಿನಿ, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ನಾಯಕರಾದ ಫ್ಲೇವಿ ಕ್ರಾಸ್ತಾ ಅತ್ತಾವರ, ಸ್ಟಾೃನ್ಲಿ ಡಿಕುನ್ನಾ, ಚಿಂತಕರಾದ ನೆಲ್ಸನ್ ರೋಚ್ ಮೊದಲಾದವರು ಭಾಗವಹಿಸಿದ್ದರು.
ಪ್ರತಿಭಟನಾ ಪ್ರದರ್ಶನಕ್ಕೂ ಮೊದಲು ಸೈಂಟ್ ಆ್ಯಗ್ನೆಸ್ ಜಂಕ್ಷನ್‌ನಿಂದ ಮಲ್ಲಿಕಟ್ಟೆಯವರೆಗೆ ಮೆರವಣಿಗೆ ನಡೆಯಿತು. ಕೊನೆಯಲ್ಲಿ ಹೋರಾಟ ಸಮಿತಿಯ ನಿಯೋಗ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.