ಮಂಗಳೂರು: ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಬಾವುಟಗುಡ್ಡೆ ಆವರಣದ ಶಿಕ್ಷಕೇತರ ಸಿಬ್ಬಂದಿಗಳ ವತಿಯಿಂದ ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ಆಟಿದ ನೆಂಪು ಕಾರ್ಯಕ್ರಮ ಜರಗಿತು.
ಆಟಿದ ನೆಂಪು ಉದ್ಘಾಟಿಸಿದ ಮಾಹೆ ವಿವಿಯ ಮಂಗಳೂರು ಕ್ಯಾಂಪಸ್ಸಿನ ಸಹಾಯಕ ಕುಲಪತಿ ಡಾ.ದಿಲೀಪ್ ಜಿ.ನಾಯಕ್ ಮಾತನಾಡಿ, ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ನಡುವೆ ಸೌಹಾರ್ದಯುತ ಸಂಬಂಧ ಬೆಳೆಸಲು ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಹೇಳಿದರು.
ಕೆಎಂಸಿ ಡೀನ್ ಡಾ.ಬಿ.ಉಣ್ಣಿಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. ಸಂಘಟಕ ಕದ್ರಿ ನವನೀತ ಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು. ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ.ಅಶಿತಾ ಉಪ್ಫೂರ್, ಕೆಎಂಸಿಯ ಅಸೋಸಿಯೇಟ್ ಡೀನ್‌ಗಳಾದ ಡಾ.ಸುರೇಶ್ ಕುಮಾರ್ ಶೆಟ್ಟಿ, ಡಾ.ಶ್ರೀಕಲಾ ಬಾಳಿಗ ಮತ್ತಿತರರು ಉಪಸ್ಥಿತರಿದ್ದರು.
ಕೆಎಂಸಿ ಆಡಳಿತ ಕಚೇರಿಯ ಮ್ಯಾನೇಜರ್ ಧರ್ಮೇಂದ್ರ ಎಂ.ಪಿ. ಸ್ವಾಗತಿಸಿದರು. ಕಾರ್ಯ ನಿರ್ವಹಣಾಧಿಕಾರಿ ಭಾನುಕಲಾ ಉದಯ್ ಆಟಿ ಖಾದ್ಯ ತಯಾರಿಸಿದ ಸಿಬ್ಭಂದಿಗಳನ್ನು ಪರಿಚಯಿಸಿದರು. ಲೀಡ್ ಟೆಕ್ ಸಪೋರ್ಟ್ ಸುಕನ್ಯಾ ಕುಮಾರಿ ವಂದಿಸಿದರು. ಎಚ್‌ಆರ್ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಮಾರು 60 ಬಗೆಯ ತುಳುನಾಡಿನ ಸಾಂಪ್ರದಾಯಿಕ ಖಾದ್ಯಗಳನ್ನು ಉಣಬಡಿಸಲಾಯಿತು.