ಕುಸಿತದ ಭೀತಿಯಲ್ಲಿ ಕೆತ್ತಿಕಲ್ ಗುಡ್ಡ ಮುಂಜಾಗ್ರತಾ ಕ್ರಮವಾಗಿ ಜೆಸಿಬಿ, ಟಿಪ್ಪರ್ ಜತೆ ತಂಡ ಸಿದ್ಧ

mng---30 july kethikal gudda
Published on

ಮಂಗಳೂರು : ರಸ್ತೆ ನಿರ್ಮಾಣದ ವೇಳೆ ಅವೈಜ್ಞಾನಿಕವಾಗಿ ಅಗೆದ ಕಾರಣ ಕೆತ್ತಿಕಲ್ ಗುಡ್ಡ ಕುಸಿತದ ಭೀತಿಯಲ್ಲಿದೆ. ಗುಡ್ಡದಿಂದ ಕೆಸರು ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಕುಸಿತ ಉಂಟಾದರೆ ಮಂಗಳೂರು-ಮೂಡುಬಿದಿರೆ ಸಂಚಾರ ಸ್ಥಗಿತಗೊಳ್ಳಲಿದೆ.


ಈ ನಡುವೆ ಮಂಗಳವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ‘ಕೆತ್ತಿಕಲ್ ಗುಡ್ಡ ಕುಸಿಯುವುದನ್ನು ಕಣ್ಣಾರೆ ಕಂಡಿದ್ದಾರೆ’ ಎನ್ನುವ ಸಂದೇಶ ಮತ್ತಷ್ಟು ಗೊಂದಲ ಉಂಟು ಮಾಡಿತ್ತು. ಈ ಭಾಗದಲ್ಲಿ ಪ್ರಯಾಣಿಸಬೇಕಾದವರು ಈ ಸಂದೇಶದಿಂದ ಆತಂಕಕ್ಕೀಡಾದರು. ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿದೆ.


ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಜೆಸಿಬಿ, ಟಿಪ್ಪರ್‌ಗಳನ್ನು ಹಾಗೂ ಕೆಲಸಗಾರರ ತಂಡವನ್ನು ಸನ್ನದ್ಧವಾಗಿಡಲಾಗಿದೆ. ಅಧಿಕಾರಿಗಳ ತಂಡ ಕೂಡ ಸ್ಥಳದಲ್ಲಿದ್ದು ನಿಗಾ ಇಟ್ಟಿದ್ದಾರೆ. ಮಂಗಳವಾರ ದಿನವಿಡೀ ಸುರಿದ ಭಾರೀ ಮಳೆಗೆ ಗುಡ್ಡ ಕುಸಿತದ ಭೀತಿ ಎದುರಾಗಿತ್ತು. ಈ ರಸ್ತೆಯಲ್ಲಿ ಸಂಚರಿಸುವವರು ಭಯದಿಂದಲೇ ಮುಂದುವರಿದಿದ್ದಾರೆ.


ಗುಡ್ಡದಿಂದ ಒರತೆ ನೀರು ಹರಿದು ಬರುತ್ತಿದ್ದು, ರಸ್ತೆಗೆ ಬರದಂತೆ ವ್ಯವಸ್ಥೆ ಮಾಡಿದ್ದಾರೆ. ಕಲ್ಲುಗಳಿಲ್ಲದೆ ಕೇವಲ ಮೆದು ಮಣ್ಣಾಗಿರುವುದರಿಂದ ಮತ್ತು ಒರತೆ ಹೆಚ್ಚಾಗಿರುವುದರಿಂದ ಯಾವುದೇ ಸಮಯದಲ್ಲಿ ಮಣ್ಣು ಕುಸಿಯುವ ಭೀತಿ ಎದುರಾಗಿದೆ. ಮಣ್ಣು ಕುಸಿಯದಂತೆ ಪೂರಕ ವ್ಯವಸ್ಥೆ ಮಾಡಲಾಗಿದೆ. ಆದರೆ ಪ್ರಕೃತಿಯ ಎದುರು ಮಾನವ ನಿರ್ಮಿಸಿದ ವ್ಯವಸ್ಥೆ ನಶ್ವರ.


ಈಗಾಗಲೇ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಶಿರೂರು ಕುಸಿತದ ಸ್ಥಳದಲ್ಲಿರುವ ತಜ್ಞರನ್ನು ಕರೆ ತಂದು ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.


ಕೆತ್ತಿಕಲ್ ಗುಡ್ಡ ಅಪಾಯಕಾರಿಯಾಗಿರುವುದು ನಿಜ. ಆದರೆ ಭಯ ಬೇಡ, ಎಚ್ಚರಿಕೆ ಇರಲಿ. ಗುಡ್ಡ ಕುಸಿದು ರಸ್ತೆಗೆ ಬಿದ್ದರೆ ಮಣ್ಣು ತೆರವು ಮಾಡಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಅಧಿಕಾರಿ, ಸಿಬಂದಿಗಳ ತಂಡ ಸದಾ ಈ ಬಗ್ಗೆ ನಿಗಾ ಇಟ್ಟಿದೆ ಎಂದು ಮನಪಾ ಆಯುಕ್ತ ಆನಂದ ಸಿ.ಎಲ್. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net