

ಮಂಗಳೂರು : ಖಾಸಗಿ ಕಾಲೇಜುಗಳಲ್ಲಿ ಸೀಟು ತೆಗೆಸಿಕೊಡುವ ಬ್ರೋಕರ್ ಕೆಲಸ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಮಂಗಳೂರಿನಲ್ಲಿ ಅಪಹರಣ ಮಾಡಿರುವ ಬಗ್ಗೆ ಕದ್ರಿ ಪೊಲೀಸರಿಗೆ ದೂರು ನೀಡಲಾಗಿದೆ.
ಕೇರಳ ಮೂಲದ ಶರತ್ ಬಾಬು(35) ಅಪಹರಣಕ್ಕೊಳಗಾದ ವ್ಯಕ್ತಿ. ಈತ ಮೆಡಿಕಲ್, ನರ್ಸಿಂಗ್ ಕಾಲೇಜುಗಳಿಗೆ ಸೀಟು ಕೊಡಿಸುವ ಬ್ರೋಕರ್ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ.
ಶರತ್ ಬಾಬು ಕಳೆದ ವರ್ಷ ಕೇರಳ ಮೂಲದ ಓರ್ವರಿಂದ 9 ಲಕ್ಷ ರೂ. ಪಡೆದುಕೊಂಡು ಬೆಂಗಳೂರಿನ ನರ್ಸಿಂಗ್ ಕಾಲೇಜಿನಲ್ಲಿ ಸೀಟು ತೆಗೆಸಿಕೊಟ್ಟಿದ್ದರು. ಆದರೆ ಕಾಲೇಜಿನವರಿಗೆ 2 ಲಕ್ಷ ರೂ. ನೀಡಿ ಉಳಿದ 7 ಲಕ್ಷ ರೂ.ಗಳನ್ನು ತನ್ನಲ್ಲಿಯೇ ಇಟ್ಟುಕೊಂಡಿದ್ದರು. ಇದು ಹಣ ನೀಡಿದವರಿಗೆ ಗೊತ್ತಾಗಿದೆ. ಹಾಗಾಗಿ ಆ ಹಣವನ್ನು ಅವರು ವಾಪಸ್ ಕೇಳುತ್ತಿದ್ದರು. ಶರತ್ ಬಾಬು ಅದನ್ನು ವಾಪಸ್ ನೀಡಿರಲಿಲ್ಲ. ಮಂಗಳವಾರದಂದು ಮಂಗಳೂರಿಗೆ ಆಗಮಿಸಿದ್ದ ಶರತ್ ಬಾಬು ತನ್ನ ಸ್ನೇಹಿತನ ಜತೆಗೆ ನಗರದ ಪಿವಿಎಸ್‌ನಲ್ಲಿದ್ದಾಗ ಕಾರಿನಲ್ಲಿ ಬಂದಿದ್ದ ಇಬ್ಬರು ಶರತ್ ಬಾಬು ಅವರನ್ನು ಬಲವಂತವಾಗಿ ಕಾರಿಗೆ ಎಳೆದು ಹಾಕಿ ಕರೆದೊಯ್ದಿದ್ದಾರೆನ್ನಲಾಗಿದೆ. ಈ ಬಗ್ಗೆ ಶರತ್‌ಬಾಬು ಸಂಬಂಧಿಕರು ದೂರು ನೀಡಿದ್ದಾರೆ.
ಕದ್ರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶರತ್ ಬಾಬು ಸಂಪರ್ಕಕ್ಕೆ ಸಿಕ್ಕಿದ್ದು ಹಣದ ವಿಚಾರವಾಗಿಯೇ ಅವರನ್ನು ಕರೆದುಕೊಂಡು ಹೋಗಿರುವುದು ಗೊತ್ತಾಗಿದೆ. ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.