ಜನ್ಮದ ಕರ್ಮಫಲದಿಂದ ದೇವರ ಸೇವೆಗೆ ಅವಕಾಶ - ಕಾವೂರು ಬ್ರಹ್ಮಕಲಶೋತ್ಸವ ಕಾರ್ಯಾಲಯ ಉದ್ಘಾಟಿಸಿ ಸಂಸದ ಕ್ಯಾ.ಬ್ರಿಜೇಶ್ ಚೌಟ

mng-jan 7-kavoor temple
Published on

ಮಂಗಳೂರು: ದೇವರ ಕಾರ್ಯ ಮಾಡಲು ಪೂರ್ವ ಜನ್ಮ ಇಲ್ಲವೇ ಈ ಜನ್ಮದ ಕರ್ಮಲದಿಂದ ಅವಕಾಶ ಸಾಧ್ಯವಾಗುತ್ತದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಸೋಮವಾರ ಕಾವೂರು ಶ್ರೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ.1ರಿಂದ 9ರ ತನಕ ನಡೆಯುವ ಬ್ರಹ್ಮಕಲಶೋತ್ಸವದ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವಷ್ಟು ದೇವಾಲಯಗಳು, ದೈವಸ್ಥಾನಗಳು, ಧಾರ್ಮಿಕ ಅನುಷ್ಠಾನಗಳು ದೇಶದ ಬೇರೆ ಎಲ್ಲಿಯೂ ಕಾಣಿಸುವುದಿಲ್ಲ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಶ್ರದ್ಧಾ ಭಕ್ತಿ, ಪ್ರಾಮಾಣಿಕತೆಯಿಂದ ಉಳ್ಳವರು ತನು ಮನ ಧನದ ಸಹಕಾರ ನೀಡಬೇಕು. ಹಿಂದೂಗಳ ಆರಾಧನಾ ಕೇಂದ್ರವನ್ನು ಶಕ್ತಿಯುತಗೊಳಿಸಿ ಹಿಂದೂ ಸಮಾಜದ ಒಗ್ಗಟ್ಟಿನ ಪ್ರತಿರೂಪವಾಗಿ ಬೆಳೆಸಬೇಕಿದೆ. ತನ್ನಿಂದಾದ ಸರ್ವ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿ, ಕ್ಷೇತ್ರದ ಸೇವೆಗೆ ಶ್ರೀ ಮಹಾಲಿಂಗೇಶ್ವರ ದೇವರು ಭಕ್ತರಿಗೆ ಶಕ್ತಿ ನೀಡಲಿ ಎಂದರು.

ಶಾಸಕ ಡಾ.ವೈ.ಭರತ್ ಶೆಟ್ಟಿ ಮಾತನಾಡಿ, ಸರ್ಕಾರದಿಂಧ ಈ ಹಿಂದೆ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಬ್ರಹ್ಮ ಕಲಶೋತ್ಸವದ ಈ ಸಂದರ್ಭದಲ್ಲಿ ಶಾಸಕ ನಿಧಿಯಿಂದ 10 ಲಕ್ಷ ರೂಪಾಯಿ ಒದಗಿಸುವುದಾಗಿ ಭರವಸೆ ನೀಡಿದರು. ದೇವರ ಸೇವಾ ಕಾರ್ಯಕ್ಕೆ ಅತ್ಯಲ್ಪ ಸಮಾಯಾವಕಾಶವಿದ್ದು, ಕಾರ್ಯಕ್ರಮದಲ್ಲಿ ಭಕ್ತಾದಿಗಳ ಕರಸೇವೆ, ತನು ಮನ ಧನಗಳ ಸಹಕಾರವಿರಲಿ. ಗ್ರಾಮದ 12 ಸಾವಿರ ಕುಟುಂಬಗಳು ಕನಿಷ್ಠ ದೇಣಿಗೆ ಕ್ಷೇತ್ರಕ್ಕೆ ಅರ್ಪಿಸಿದರೂ ದೇವರ ಕೆಲಸ ಕಾರ್ಯಗಳು ಧಾರ್ಮಿಕ ಶ್ರದ್ಧೆ, ವಿಜೃಂಭಣೆಯಿಂದ ನಡೆಸಲು ಶಕ್ತಿ ಬರುತ್ತದೆ ಎಂದರು.

ಬ್ರಹ್ಮಕಲಕೋತ್ಸವ ಸಮಿತಿಯ ಗೌರವಾಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿ ಸರ್ವರ ಸಹಕಾರ ಯಾಚಿಸಿದರು. ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳಲು ನಮಗೆ ಅವಕಾಶ ಸಿಕ್ಕಿರುವುದು ದೇವರ ದಯೆ. ಎಲ್ಲರೂ ದೇವರ ಆಶೀರ್ವಾದಕ್ಕೆ ಪಾತ್ರರಾಗೋಣವೆಂದರು. ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೆನಿವಾಸ ಭಟ್ ಆಶೀರ್ವವಚನ ನೀಡಿದರು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ಪ್ರಭು, ಸಮಿತಿಯ ಪ್ರಮುಖರಾದ ಆಶಿಶ್ ಬಳ್ಳಾಲ್, ಸುಧಾಕರ ಶೆಟ್ಟಿ ಮುಗ್ರೋಡಿ, ಕಾರ್ಯಾಧ್ಯಕ್ಷ ಅವಿನಾಶ್ ನಾಯಕ್, ಉದ್ಯಮಿ ಕಿಶೋರ್ ಸುವರ್ಣ, ಹರೀಶ್ ಶೆಟ್ಟಿ, ಪ್ರದ್ಯಮ್ನ ರಾವ್ ಶಿಬರೂರು, ಡಾ.ಅರುಣ್ ರೈ ದೇರ್ಲ, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು, ವ್ಯವಸ್ಥಾಪನ ಸಮಿತಿಯ,ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು,ಸದಸ್ಯರು,ಸಮಿತಿಯ ಪದಾಧಿಕಾರಿಗಳು, 7 ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಧಾಕರ ಆಳ್ವ ಸ್ವಾಗತಿಸಿದರು. ಪ್ರಿಯಾ ಹರೀಶ್ ನಿರೂಪಿಸಿದರು. ಕೋಶಾಧಿಕಾರಿ ದೀಪಕ್ ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net