

ಮಂಗಳೂರು: ದೇವರ ಸೇವೆ ಮಾಡುವುದು ಜೀವನದ ಸುಯೋಗ. ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಎಲ್ಲರೂ ಜತೆಯಾಗಿ ಭಾಗಿಯಾದಾಗ ದೇವರ ಸಾಕ್ಷಾತ್ಕಾರ ಸಿಗುತ್ತದೆ ಎಂದು ಶಾಸಕ, ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ.ವೈ. ಭರತ್ ಶೆಟ್ಟಿ ಹೇಳಿದರು.
ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾ.1ರಿಂದ ಮಾ.9ರವರೆಗೆ ನಡೆಯಲಿದ್ದು, ಇದರ ಪ್ರಯುಕ್ತ ಸೋಮವಾರ ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಬ್ರಹ್ಮಕಲಶೋತ್ಸವದ ಪುರ್ವ ಸಿದ್ಧತೆ ಕೆಲಸಗಳು ಊರ-ಪರವೂರ ಭಕ್ತರ ಸಹಕಾರದಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಎಲ್ಲಾ ಭಕ್ತರು ಇನ್ನಷ್ಟು ತಮ್ಮನ್ನು ತಾವು ತೊಡಗಿಸಿಕೊಂಡು ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ದೇವಸ್ಥಾನದ ಪ್ರಧಾನ ಅರ್ಚಕ ಕೆ.ಶ್ರೀನಿವಾಸ್ ಭಟ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಗರ್ಭಗುಡಿಯ ಪುನರ್ ನಿರ್ಮಾಣದೊಂದಿಗೆ ನಡೆಯುತ್ತಿರುವ ಈ ಬ್ರಹ್ಮಕಲಶ ವಿಶೇಷವಾದುದು. ಮುಂದೆ 500 ಅಥವಾ ಸಾವಿರ ವರ್ಷಗಳ ಅನಂತರವಷ್ಟೇ ಈ ರೀತಿ ಗರ್ಭಗುಡಿ ಪುನರ್ ನಿರ್ಮಾಣದೊಂದಿಗೆ ಬ್ರಹ್ಮಕಲಶ ನಡೆಯಬಹುದಾಗಿದೆ. ಆದ್ದರಿಂದ ಭಕ್ತರು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, ದೇವರಿಗೆ ಶರಣಾಗಿ ಮನಪೂರ್ವಕವಾಗಿ ದೇವರ ಸೇವೆಯಲ್ಲಿ ತೊಡಗಿದಾಗ ಅನುಗ್ರಹ ಖಂಡಿತವಾಗಿಯೂ ಸಿಗುತ್ತದೆ ಎಂದರು.
ಸಂಘಟನಾ ಸಂಚಾಲಕ ಪ್ರಕಾಶ ಪಿ.ಎಸ್ ಅವರು ಮಾತನಾಡಿ, ಈಗಾಗಲೇ 8,000ಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಉಳಿದ ಮನೆಗಳ ಸಂಪರ್ಕ ಕಾರ್ಯ ಕೂಡ ನಡೆಯಬೇಕಾಗಿದೆ. ಮಹಾಕುಂಭ ಮೇಳ ನಡೆಯುತ್ತಿರುವ ಈ ಪುಣ್ಯ ವರ್ಷದಲ್ಲಿ ಕಾವೂರು ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯುತ್ತಿರುವುದು ವಿಶೇಷ ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಆಶಿಕ್ ಬಳ್ಳಾಲ್ ಕೂಳೂರುಬೀಡು ಮಾತನಾಡಿ, ಕೇವಲ ಸಮಿತಿ ಅಥವಾ ಪದಾಧಿಕಾರಿಗಳಿಂದ ಮಾತ್ರವೇ ಬ್ರಹ್ಮಕಲಶ ಯಶಸ್ವಿ ಯಾಗುವುದಿಲ್ಲ. ಎಲ್ಲ ಭಕ್ತರ ಸಹಕಾರ ಅಗತ್ಯ. ಶಿಲಾಮಯ ಗರ್ಭಗುಡಿಯೊಂದಿಗೆ ನಡೆಯುತ್ತಿರುವ ಈ ಬ್ರಹ್ಮಕಲಶದಲ್ಲಿ ಪಾಲ್ಗೊಳ್ಳುವುದು ಅತ್ಯಂತ ಪುಣ್ಯದ ಕಾರ್ಯ ಎಂದರು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಮೋಹನ ಪ್ರಭು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸುಧಾಕರ ಆಳ್ವ ಕಾವೂರು ಸ್ವಾಗತಿಸಿದರು. ಕೋಶಾಧಿಕಾರಿ ದೀಪಕ್ ಪೂಜಾರಿ ಮುಲ್ಲಕಾಡು ವಂದಿಸಿದರು. ಡಾ.ಪ್ರಿಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.