

ಮಂಗಳೂರು: ಕಾವೂರು ಶ್ರೀ ಮಹಾಲಿಂಗೇಶ್ವರ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಹಾಗೂ ದಾನದತ್ತಿ ಪ್ರತಿಷ್ಠಾನದ ವತಿಯಿಂದ 28ನೇ ವರ್ಷದ ಮೊಸರು ಕುಡಿಕೆ ಉತ್ಸವ ಕಾವೂರು ಕೇಂದ್ರ ಮೊಸರು ಕುಡಿಕೆ ಮೈದಾನದಲ್ಲಿ ಜರಗಿತು.
ಶಾಸಕ ಡಾ.ವೈ.ಭರತ್ ಶೆಟ್ಟಿ ಮಾತನಾಡಿ, ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಕಾರ್ಯಕಲಾಪಗಳಲ್ಲಿ ನಾವೆಲ್ಲ ಭಾಗವಹಿಸುವ ಮೂಲಕ ಧರ್ಮ ಜಾಗೃತಿಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಧರ್ಮ ಕಾರ್ಯಗಳು ನಿಯಮಿತವಾಗಿ ಸಮಾಜದಲ್ಲಿ ನಡೆಯುತ್ತಿದ್ದರೆ ಸನ್ಮಂಗಲ ಉಂಟಾಗುತ್ತದೆ ಎಂದರು.
ಪಾಲಿಕೆ ಸದಸ್ಯರಾದ ಸುಮಂಗಳಾ ರಾವ್, ಲೋಹಿತ್ ಅಮೀನ್, ಗಾಯತ್ರಿ ಎ., ಸಂಗೀತಾ ನಾಯಕ್, ಪ್ರಣಾಮ್ ಬಿಲ್ಡರ್ಸ್ ಮಾಲೀಕ ಕೃಷ್ಣರಾಜ ಸಾಲ್ಯಾನ್, ಉದ್ಯಮಿ ಉಮೇಶ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಮೋಹನ್ ಪ್ರಭು, ಮೊಸರು ಕುಡಿಕೆ ಉತ್ಸವ ಸಮಿತಿಯ ಗೌರವಾಧ್ಯಕ್ಷ ತುಕರಾಮ್ ಶೆಟ್ಟಿ, ಅಧ್ಯಕ್ಷ ಕಿಶೋರ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ದಿನೇಶ್ ಶೆಟ್ಟಿ ವಾಚಿಸಿದರು. ಕಾರ್ಯದರ್ಶಿ ದೀಪಕ್ ಪೂಜಾರಿ ಸ್ವಾಗತಿಸಿದರು. ಸುಧಾಕರ್ ಆಳ್ವ ಪ್ರಸ್ತಾವಣೆಗೈದರು. ದೇವಳದ ಬ್ರಹ್ಮಕಲಶೋತ್ಸವದ ಕುರಿತು ಸದಾಶಿವ ಶೆಟ್ಟಿ ಬೊಲ್ಪುಗುಡ್ಡೆ ವಿವರಿಸಿದರು. ಕೋಶಾಧಿಕಾರಿ ತುಕರಾಮ್ ಸನಿಲ್ ವಂದಿಸಿದರು. ಪ್ರಿಯಾ ಹರೀಶ್ ನಿರೂಪಿಸಿದರು.
ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಮೊಸರು ಕುಡಿಕೆ ಮೆರವಣಿಗೆ ನಡೆಯಿತು. ಝೇಂಕಾರ ಮೆಲೊಡೀಸ್ ಭಟ್ಕಳ ಇವರಿಂದ ಮಿಮಿಕ್ರಿ ಹಾಗೂ ಡ್ಯುಯಲ್ ವಾಯ್ಸ ಗಾಯನವನ್ನೊಳಗೊಂಡ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಿತು.