ಸಾಮಾಜಿಕ ಜಾಲತಾಣಗಳ ಅತಿಯಾದ ಗೀಳು ಅಪಾಯಕಾರಿ ಕಾವೂರು ಮಂಥನ ಕಾರ್ಯಕ್ರಮದಲ್ಲಿ ಸುನಿಲ್ ಕುಲಕರ್ಣಿ ಅಭಿಮತ

mng--1 Sep Kavoor manthana
Published on

ಮಂಗಳೂರು: ಸಾಮಾಜಿಕ ಜಾಲತಾಣ (ಸೋಷಿಯಲ್ ಮೀಡಿಯಾ) ಎನ್ನುವುದು ಸಮಾಜದಲ್ಲಿ ಆಳವಾಗಿ ನಮ್ಮ ದಿನನಿತ್ಯದ ಬದುಕಿನ ಸಂಗಾತಿಯಂತಿದ್ದು, ನಮ್ಮ ಜೀವನದ ಮೌಲ್ಯಗಳನ್ನೇ ಅಧಃಪತನಕ್ಕೆ ಒಯ್ಯುತ್ತಿರುವ ಹೊಸ ಶತ್ರು. ಇದರ ಗೀಳು ಅಪಾಯಕಾರಿ ಎಂದು ಭಾರತ್ ಟ್ರಸ್ಟ್ ನ ಟ್ರಸ್ಟಿ ಸುನಿಲ್ ಕುಲಕರ್ಣಿ ಹೇಳಿದರು.


ಕಾವೂರುನಲ್ಲಿ ರಾ.ಸ್ವ.ಸೇವಕ ಸಂಘದ ಸಂಘಚಾಲಕ್ ಬಿ.ಕೆ.ಕುಮಾರ್ ಅವರ ಮಾರ್ಗದರ್ಶನದಲ್ಲಿ, 8ನೇ ಆವೃತ್ತಿಯ ಮಂಥನ ಮಾಸಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರು ದಿನದಲ್ಲಿ ಎಷ್ಟು ಸಮಯ ಮತ್ತು ಯಾವ ವಿಷಯಕ್ಕೆ ಸಾಮಾಜಿಕ ಜಾಲತಾಣವನ್ನು ಅವಲಂಬಿಸಬೇಕು ಎನ್ನುವುದರ ಬಗ್ಗೆ ಸಾಕಷ್ಟು ಜಾಗೃತೆ ವಹಿಸಬೇಕು ಎಂದರು.


ನಮ್ಮ ಯಾವುದೇ ವೈಯಕ್ತಿಕ ಮಾಹಿತಿ ಗೌಪ್ಯವಾಗಿ ಉಳಿದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಯಾವುದನ್ನು ಹಂಚಿಕೊಳ್ಳುಬಾರದು ಎನ್ನುವ ವಿವೇಚನೆ ಅತ್ಯಗತ್ಯ. ಅಂಧಾನುಕರಣೆ ಮತ್ತು ಇನ್ನೊಬ್ಬರ ಜೊತೆ ಹೋಲಿಸಿಕೊಂಡು ಅವರಿಗಿಂತ ಹೆಚ್ಚು ಫಾಲವರ್ಸ್,ಲೈಕ್ಸ್,ಶೇರ್ ಪಡೆಯಬೇಕು ಎನ್ನುವ ಅವಾಸ್ತವ ಆಕಾಂಕ್ಷೆ, ಅಪಾಯಕಾರಿ ಸಾಹಸಕ್ಕೆ ಕೈ ಹಾಕುವುದು, ಸೆಲ್ಫಿ ಹುಚ್ಚಿನಂತಹ ಚಟದಿಂದ ಎಷ್ಟೊ ಜನರ ಮಾನ ಮತ್ತು ಪ್ರಾಣಹಾನಿ ಆಗುತ್ತಿರುವುದು ಹೊಸ ವಿಚಾರವಾಗಿ ಉಳಿದಿಲ್ಲ.


ಮೊಬೈಲ್ ವ್ಯಸನದಿಂದ ನಮ್ಮ ಭಾರತೀಯ ಜೀವಾಳವಾದ ಕುಟುಂಬ ಪದ್ದತಿಯ ಮೌಲ್ಯ ಕುಸಿಯುತ್ತಿರುವುದು ಒಂದು ರೀತಿಯ ನಿಧಾನಗತಿಯ ವಿಷವನ್ನು ಸೇವಿಸುತ್ತಿರುವಂತೆ ಆಗಿದೆ. ಇತ್ತೀಚಿನ ಮೈಕ್ರೋ ಸಂಸಾರದಲ್ಲಿ ಎಲ್ಲರೂ ಒಟ್ಟಿಗೆ ಇದ್ದರೂ ಸಹ,ಬಾಂಧವ್ಯ ಮಾಯವಾಗುತ್ತಿದೆ.
ಇಂದಿನ ಜೀವನ ಪದ್ದತಿಗೆ ಮೊಬೈಲ್ ಬಳಕೆ ಅತ್ಯಗತ್ಯ ಎನ್ನುವುದು ಕಟು ವಾಸ್ತವ. ಆದರೆ ಯಾವತ್ತೂ ಇದು ಅನಿವಾರ್ಯವಲ್ಲ ಎನ್ನುವ ಮನಸ್ಥಿತಿ ನಮ್ಮಲ್ಲಿ ಜಾಗೃತವಾಗಬೇಕು. ಸಾಮಾಜಿಕ ಜಾಲತಾಣದಲ್ಲಿ ತೊಡಗಿದರೆ,ನಾವು ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗಿದ್ದೇನೆ ಎಂದು ತಿಳಿಯುವುದು ಸಮಾಜಕ್ಕೆ ಮಾರಕವಾಗಿದೆ ಎಂದರು.


ಅಮೃತ ವಿದ್ಯಾಲಯಮ್ ನ ಪ್ರಾಂಶುಪಾಲೆ ಅಕ್ಷತಾ ಶೆಣೈ ಅತಿಥಿಯಾಗಿದ್ದರು. ಬೆಳಗ್ಗೆ ಎದ್ದ ತಕ್ಷಣ ದೇವರ ನೆನೆಯುತ್ತಿದ್ದ ಕಾಲದಿಂದ, ಮೊಬೈಲ್ ಹಿಡಿದು ನಮ್ಮ ಸೋಷಿಯಲ್ ಮೀಡಿಯಾ ಖಾತೆ ನೋಡದೆ ದಿನ ಪ್ರಾರಂಭವೇ ಆಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ನಾವು ಬದಲಾಗಿದ್ದೇವೆ. ಖಾಯಿಲೆಗಳು ಬಂದಾಗ ಗೂಗಲ್ ನಂತ ಸರ್ಚ ಎಂಜಿನ್ ಬಳಸಿ ನಾವೇ ಔಷಧಗಳನ್ನು ಹುಡುಕಿ ಸ್ವತಃ ಡಾಕ್ಟರ್ ರೀತಿಯಲ್ಲಿ ನಡೆದು ಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ನಾವೇ ಸೃಷ್ಟಿಸಿಕೊಂಡ ಈ ಮಾಯಾಜಾಲದ ಚಟದಿಂದ, ನಾವುಗಳು ಮನಸ್ಸು ಮಾಡಿದರೆ ಮಾತ್ರ ಹೊರಬರಲು ಸಾಧ್ಯ ಎಂದು ಕಿವಿ ಮಾತು ಹೇಳಿದರು.


ಸುಮಿತಾ ಹರೀಶ ಸ್ವಾಗತಿಸಿದರು. ರೋಹಿತಾಕ್ಷ ವಂದಿಸಿದರು. ಪತ್ರಕರ್ತ ಮೋಹನದಾಸ್ ಮರಕಡ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net