

ಮಂಗಳೂರು: ಶ್ರದ್ಧೆ, ಭಕ್ತಿ, ನಂಬಿಕೆ, ವಿಶ್ವಾಸದಿಂದ ನಾವು ಭಗವಂತನನ್ನು ನಂಬಿದರೆ ಬ್ರಹ್ಮಕಲಶೋತ್ಸವ ಆಗಿದ್ದು ಸಾರ್ಥಕ್ಯವಾಗುತ್ತದೆ. ಇಂತಹ ಬ್ರಹ್ಮಕಲಶೋತ್ಸವಗಳಿಂದ ಬದುಕಿನ ಯಥಾರ್ಥ ಜ್ಞಾನ, ಸತ್ಯ ಶೋಧನೆಯ ಅರಿವು ಸಾಧ್ಯವಾಗುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಕಾವೂರು ಶಾಖಾ ಮಠದ ಡಾ.ಧರ್ಮಪಾಲನಾಥ ಸ್ವಾಮೀಜಿ ನುಡಿದರು.
ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವದ 8ನೇ ದಿನ ಶನಿವಾರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಸಾನಿಧ್ಯ ಶಕ್ತಿಯ ಪೀಠವಾಗಿದೆ. ಭಕ್ತರು ಶುದ್ಧ, ಶ್ರದ್ಧೆಯಿಂದ ಬಂದು ಇಷ್ಟಾರ್ಥಗಳನ್ನು ಬೇಡಿಕೊಂಡಾಗ ದೇವರ ಅನುಗ್ರಹ ಖಂಡಿತಾ ಸಿಗುತ್ತದೆ ಎಂದರು.
ಅಡ್ವೆ ಲಕ್ಷ್ಮೀಶ ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡಿದರು. ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ದೇವಾಡಿಗರ ಸಂಘದ ರಾಜ್ಯಾಧ್ಯಕ್ಷ ಅಶೋಕ್ ಮೊಯಿಲಿ, ಕ್ಯಾಡ್ ಸೆಂಟರ್‌ನ ಸ್ಟ್ರಕ್ಚರಲ್ ಎಂಜಿನಿಯರ್ ಅನಿಲ್ ಹೆಗ್ಡೆ, ಕುಲಶೇಖರ ಶ್ರೀ ವೀರನಾರಾಯಣ ದೇವಳದ ಆಡಳಿತ ಮೊಕ್ತೇಸರ ಕೆ.ಸುಂದರ ಕುಲಾಲ್, ಉದ್ಯಮಿಗಳಾದ ಬಾಲಕೃಷ್ಣ ದಾಸ್, ಗೀರೀಶ್ ಎಂ.ಶೆಟ್ಟಿ, ಕೇಶವ ಅಮೀನ್,ಗಣೇಶ್ ಶೆಟ್ಟಿ, ಮನಪಾ ನಿಕಟಪೂರ್ವ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್, ಲೋಹಿತ್ ಕುಮಾರ್ ಅತಿಥಿಗಳಾಗಿದ್ದಾರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆಶಿಕ್ ಬಳ್ಳಾಲ್ ಕುಳೂರುಬೀಡು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ಪ್ರಭು ಮೊದಲಾದವರಿದ್ದರು.
ಪ್ರಶಾಂತ್ ಪೈ ಪದವಿನಂಗಡಿ ಸ್ವಾಗತಿಸಿದರು. ಕೋಶಾಧಿಕಾರಿ ದೀಪಕ್ ಪೂಜಾರಿ ವಂದಿಸಿದರು. ಶಿಲ್ಪಾ ಸಂತೋಷ್ ಹಾಗೂ ಗುರುಪ್ರಸಾದ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸೌರಭ ಕಲಾ ಪರಿಷತ್ ಮಂಗಳೂರು ಇದರ ಗುರು ಡಾ.ಶ್ರೀವಿದ್ಯಾ ಶಿಷ್ಯ ವೃಂದದವರಿಂದ ‘ಶ್ರೀ ರಾಮಾಯಣ ದರ್ಶನಂ’ ನೃತ್ಯ ರೂಪಕ, ಸರಯೂ ಯಕ್ಷ ಬಳಗ ಕೋಡಿಕಲ್ ಇವರಿಂದ ಯಕ್ಷಗಾನ ಬಯಲಾಟ ‘ವಿಷ್ಣುಲೀಲೆ’, ವಿದುಷಿ ಜ್ಞಾನ ಐತಾಳ್ ನೇತೃತ್ವದ ಹೆಜ್ಜೆನಾದ ತಂಡದಿಂದ ನೃತ್ಯ ಮತ್ತು ಸಂಗೀತ ವೈಭವ ಜರುಗಿತು.