

ಮಂಗಳೂರು: ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಮಂಗಳೂರು ಕಪಿತಾನಿಯೋ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಖೋ ಖೋ ಅಸೋಸಿಯೇಶನ್, ದ.ಕನ್ನಡ ಜಿಲ್ಲಾ ಖೋ ಖೋ ಅಸೋಸಿಯೇಶನ್, ಕಪಿತಾನಿಯೋ ಖೋ ಖೋ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಭಾನುವಾರ ಆಯೋಜಿಸಲಾದ ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿ ಉದ್ಘಾಟಿಸಿ, ಅವರು ಮಾತನಾಡಿದರು.
ಖೋ ಖೋ ಕ್ರೀಡೆಗೆ ಇತ್ತೀಚಿನ ದಿನಗಳಲ್ಲಿ ಪ್ರಾಶಸ್ತ್ಯ ನೀಡುತ್ತಿರುವುದು ಕಡಿಮೆಯಾಗುತ್ತಿದೆ. ಕಪಿತಾನಿಯೋ ಶಾಲೆಯಲ್ಲಿ ಸರ್ವರ ಸಹಯೋಗದಲ್ಲಿ ಆಯೋಜನೆಗೊಂಡಿರುವುದು ರಾಜ್ಯಕ್ಕೆ ಮಾದರಿ. ಕಪಿತಾನಿಯೋ ಶಾಲೆಗೆ ಇತಿಹಾಸವಿದ್ದು, ಸರ್ವ ಜನರಿಗೆ ಇಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಪದ್ಮರಾಜ್ ಮುಖ್ಯ ಅತಿಥಿಯಾಗಿದ್ದರು. ಖೋ ಖೋ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಒಲಿಂಪಿಕ್ಸ್‌ನಲ್ಲಿ ಮಾನ್ಯತೆ ಸಿಗಬೇಕಾಗಿದೆ. ದೈಹಿಕ ಕ್ಷಮತೆ ಮತ್ತು ಏಕಾಗ್ರತೆ ವೃದ್ಧಿಗೆ ಈ ಕ್ರೀಡೆ ಪೂರಕವಾಗಿದೆ. ಇದನ್ನು ಜನಪ್ರಿಯಗೊಳಿಸಬೇಕಾಗಿದೆ ಎಂದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ನಟ ಶನಿಲ್ ಗುರು, ಕಪಿತಾನಿಯೋ ವಿದ್ಯಾ ಸಂಸ್ಥೆ ಜಂಟಿ ಕಾರ್ಯದರ್ಶಿ ಸೆಲಿನ್ ಜೇನ್ ಮೆಂಡೋನ್ಸಾ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಜಂಟಿ ನಿರ್ದೇಶಕ ಪ್ರದೀಪ್ ಡಿಸೋಜ, ಸಹಾಯಕ ಪೊಲೀಸ್ ಉಪನಿರೀಕ್ಷಕ ಸುಧಾಕರ ರಾವ್, ಉದ್ಯಮಿಗಳಾದ ಶಿವಪ್ರಸಾದ್ ಶೆಟ್ಟಿ, ಕಿಶೋರ್ ನಾಯಕ್, ದ.ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್ ಮೊದಲಾದವರು ಉಪಸ್ಥಿತರಿದ್ದರು.
ಕೌಶಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಜೆ.ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.