

ಮಂಗಳೂರು: ಹರಿಪಾದಗೈದಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣೆಯೊಂದಿಗೆ ಸಂತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವವನ್ನು ನ.19ರಂದು ಸಂಜೆ 3 ರಿಂದ ಕದ್ರಿ ಕಂಬಳ ರಸ್ತೆ, ಮಲ್ಲಿಕಾ ಬಡಾವಣೆಯಲ್ಲಿರುವ ‘ಮಂಜುಪ್ರಾಸಾದ’ ನಿಲಯದ ವಾದಿರಾಜ ಮಂಟಪದ ವಿಶ್ವೇಶತೀರ್ಥ ವೇದಿಕೆಯಲ್ಲಿ ಕಲ್ಕೂರ ಪ್ರತಿಷ್ಠಾನ ಆಯೋಜಿಸಿದೆ.
ಫಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರಗಲಿದ್ದು, ಈ ಸಂದರ್ಭ ದಾಸ ಸಾಹಿತ್ಯ ಪ್ರಾಜೆಕ್ಟ್ ತಿರುಪತಿ ಮತ್ತು ಮಂತ್ರಾಲಯದ ಆಹ್ವಾನಿತ ಗಾಯಕ ದಾಸ ಸಂಕೀರ್ತನಕಾರ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ಕಲ್ಕೂರ ಪ್ರತಿಷ್ಠಾನದಿಂದ ಕನಕದಾಸ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಶಾಸಕ ಡಿ.ವೇದವ್ಯಾಸ ಕಾಮತ್ ದೀಪ ಪ್ರಜ್ವಲನಗೈಯ್ಯಲಿದ್ದು , ಕನಕದಾಸರ ಜೀವನ ದರ್ಶನದ ಕುರಿತು ಬೆಟ್ಟಂಪಾಡಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಉಪನ್ಯಾಸ ನೀಡಲಿರುವರು. ಮೇಯರ್ ಮನೋಜ್ ಕುಮಾರ್ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.
ವಿವಿಧ ಭಜನಾ ತಂಡಗಳಿಂದ ಕನಕದಾಸ ಗೀತ ಗಾಯನ ನಡೆಯಲಿದೆ. ಈ ಸಂದರ್ಭ ಶ್ರೀಗಳಿಂದ ಗೋವು ಪೂಜೆ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.