ಮಧುಮೇಹ ಮಾರಕ ಕಾಯಿಲೆಯ ಮಾಹಿತಿ, ಜಾಗೃತಿ, ಮೂಡಿಸಿ ನಿಯಂತ್ರಿಸಿ ದಿನಾಚರಣೆ ಉದ್ಘಾಟಿಸಿ ಡಾ. ಮಹಮ್ಮದ್ ಇಸ್ಮಾಯಿಲ್ ಸಲಹೆ

mng--9 Nov Diabities kanachur
Published on

ಮಂಗಳೂರು : ದೇಹದ ಆರೋಗ್ಯ ಮತ್ತು ವಿವಿಧ ಅಂಗಾಂಗಗಳ ಮೇಲೆ ಕಠಿಣ ದುಷ್ಪರಿಣಾಮ ಬೀರುವ ಮಧುಮೇಹ ಕಾಯಿಲೆಯ ಮಾಹಿತಿ, ಜಾಗೃತಿ, ಮುಂಜಾಗ್ರತೆ, ಉಪಶಮನ ಚಿಕಿತ್ಸಾ ಕ್ರಮದ ಬಗ್ಗೆ ಜಾಗೃತಿ ನೀಡುವ ಅವಶ್ಯಕತೆ ಇದೆ ಎಂದು ಕರ್ನಾಟಕ ವೈದ್ಯಕೀಯ ಮಂಡಳಿಯ ವೀಕ್ಷಕ ಪ್ರತಿನಿಧಿಯಾದ ಡಾ.ಮೊಹಮ್ಮದ್ ಇಸ್ಮಾಯಿಲ್ ಹೇಳಿದರು.

ಅವರು ಕಣಚೂರು ವೈದ್ಯಕೀಯ ಕಾಲೇಜಿನ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಶನಿವಾರ ಸಂಸ್ಥೆಯ ಸಭಾಂಗಣದಲ್ಲಿ ಜರಗಿದ ವಿಶ್ವ ಮಧುಮೇಹ ದಿನಾಚರಣೆಯನ್ನು ಉದ್ಘಾಟಿಸಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳನ್ನು ಮತ್ತು ಉದ್ದೇಶಿಸಿ ಮಾತನಾಡಿದರು. ಪ್ರತಿನಿಧಿಗಳು ಸಂಸ್ಥೆಯ ನಿರಂತರ ವೈದ್ಯಕೀಯ ಶಿಕ್ಷಣದ ಅಂಗವಾಗಿ ಆಯೋಜಿಸಿದ ವೈದ್ಯಕೀಯ ಕಾರ್ಯಗಾರದ ಸದುಪಯೋಗವನ್ನು ಪಡೆಯಬೇಕೆಂದು ನುಡಿದು ಕಾರ್ಯಗಾರಕ್ಕೆ ಶುಭಕೋರಿದರು.

ಸಂಘಟನಾ ಸಮಿತಿಯ ಅಧ್ಯಕ್ಷ ಹಾಗೂ ವೈದ್ಯಕೀಯ ಶಾಸ್ತ್ರದ ಮುಖ್ಯಸ್ಥ ಡಾ.ದೇವದಾಸ್ ರೈ ಅವರು, ಮಧುಮೇಹ ಕಾಯಿಲೆಯು ಒಂದು ಆಧುನಿಕ ಜೀವನ ಶೈಲಿ ಪದ್ಧತಿಯ ಕಾಯಿಲೆ ಆಗಿದ್ದು, ಕೆಲಸದ ಒತ್ತಡ, ಬೊಜ್ಜು, ಅಧಿಕ ಸಕ್ಕರೆ ಅಂಶದ ಆಹಾರ ಸೇವನೆ ಮತ್ತು ವ್ಯಾಯಾಮ ರಹಿತ ಜೀವನ ಮುಖ್ಯ ಕಾರಣವೆಂದ ಅವರು, ಅದರ ಲಕ್ಷಣ ಚಿಕಿತ್ಸಾ ಕ್ರಮಗಳ ಬಗ್ಗೆ ವಿವರ ನೀಡಿದರು.

ಈ ಕಾರ್ಯಗಾರದಲ್ಲಿ ಡಾ.ಶ್ರೀನಾಥ್ ಶೆಟ್ಟಿ, ಡಾ.ಪ್ರಸನ್ನ ಕುಮಾರ್, ಡಾ.ಮಹಮ್ಮದ್ ಶಮೀಮ್, ಡಾ.ಲತೀಶ್ ಲಿಯೋ, ಡಾ.ಕಿರಣ್ ರೇವನ್ಕರ್ ಮತ್ತು ಡಾ.ಮೇಘ ಖ್ಯಾತ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾಯಿಲೆಯ ಉಪಶಮನ ಮತ್ತು ನಿರ್ವಹಣೆ ಬಗ್ಗೆ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಬೆಂಗಳೂರು ನಗರ ಮೂಲದ ಡಾ.ಪ್ರಸನ್ನ ಕುಮಾರ್, ಸಂಸ್ಥೆಯ ಪ್ರಾಂಶುಪಾಲ ಡಾ.ಶಹನವಾಜ್ ಮನಿಪಾಡಿ, ವೈದ್ಯಕೀಯ ಅಧೀಕ್ಷ ಡಾ.ಹರೀಶ್ ಶೆಟ್ಟಿ, ಸಲಹಾ ಸಮಿತಿಯ ಸದಸ್ಯ ಡಾ.ಎಂ.ವಿ. ಪ್ರಭು, ಆಡಳಿತ ಅಧಿಕಾರಿ ಡಾ.ರೋಹನ್ ಮೊನಿಸ್ ಉಪಸ್ಥಿತರಿದ್ದರು.

ಈ ವೈದ್ಯಕೀಯ ಕಾರ್ಯಗಾರದಲ್ಲಿ ಸುಮಾರು 180 ವೈದ್ಯರು, ವೈದ್ಯಕೀಯ ಶಿಕ್ಷಣ, ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರತಿನಿಧಿಗಳಾಗಿ ಭಾಗವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಡಾ.ಶ್ರೀಕಾಂತ್ ಹೆಗ್ಡೆ ವಂದಿಸಿದರು. ಡಾ. ಸನಿನ್ ಮತ್ತು ಡಾ.ವೆಂಚಲ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net