ಜ.22ರಂದು ಮಂಗಳೂರು ಕಂಬಳ

kambala mangalore
Published on

ಮಂಗಳೂರು: ಕ್ಯಾಪ್ಟನ್ ಬೃಜೇಶ್ ಚೌಟ ಸಾರಥ್ಯದಲ್ಲಿ 6ನೇ ವರ್ಷದ ಮಂಗಳೂರು ಕಂಬಳ ಜ.22ರಂದು ಗೋಲ್ಡ್ ಫಿಂಚ್ ಸಿಟಿಯ ರಾಮ ಲಕ್ಷ್ಮಣ ಜೋಡು ಕರೆಯಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಕಂಬಳದ ಪೂರ್ವಭಾವಿ ಸಭೆಯು ಶುಕ್ರವಾರ ಮಂಗಳೂರಿನ ಪತ್ತುಮುಡಿ ಸೌಧದಲ್ಲಿ ನಡೆಯಿತು.

ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ, ಕಂಬಳವನ್ನು ಮುಂದಿನ ತಲೆಮಾರುಗಳಿಗೆ ಉಳಿಸುವ ಉದ್ದೇಶದಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯೋನ್ಮುಖರಾಗುವಂತೆ ಹಾಗೂ ಕಂಬಳಕ್ಕೆ ಮೆರುಗನ್ನು ನೀಡುವ ದೃಷ್ಟಿಯಿಂದ ಕರಾವಳಿಯ ಸಂಸ್ಕೃತಿಯನ್ನು ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಕರೆ ನೀಡಿದರು.

ಮಂಗಳೂರು ಕಂಬಳ ಸಮಿತಿ ಅಧ್ಯಕ್ಷರಾದ ಕ್ಯಾಪ್ಟನ್ ಬೃಜೇಶ್ ಚೌಟ ಮಾತನಾಡಿ 6ನೇ ವರ್ಷಕ್ಕೆ ಕಾಲಿಡುತ್ತಿರುವ ಮಂಗಳೂರು ಕಂಬಳವನ್ನು ಹೆಚ್ಚು ವಿಜೃಂಭಣೆಯಿಂದ ಆಯೋಜಿಸುವ ನಿಟ್ಟಿನಲ್ಲಿ ಸಲಹೆ-ಸೂಚನೆಗಳನ್ನು ಪಡೆಯಲಾಯಿತು.

ಸಭೆಯ ಪ್ರಾರಂಭದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಭಾರತ ಸರ್ಕಾರದ ಅಲೆಮಾರಿ ಅಭಿವೃದ್ಧಿ ಸಮಿತಿ ಸದಸ್ಯರು, ಮಂಗಳೂರು ಕಂಬಳ ಸಮಿತಿ ಉಪಾಧ್ಯಕ್ಷರಾದ ಭಾಸ್ಕರ್ ದಾಸ್ ಎಕ್ಕಾರು ಹಾಗೂ ಗಣೇಶ ಶೆಟ್ಟಿ ಮಡಕಣ ಗುತ್ತು ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಲೋಕೇಶ್ ಶೆಟ್ಟಿ ಕೊಡೆತ್ತೂರು ನುಡಿ ನಮನ ಸಲ್ಲಿಸಿದರು.

ಜಿಲ್ಲಾ ಕಂಬಳ ಸಮಿತಿಯ ಪಿ.ಆರ್. ಶೆಟ್ಟಿ, ವಿಜಯಕುಮಾರ್ ಕಂಗಿನಮನೆ, ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್, ಕಂಬಳ ಸಮಿತಿಯ ಗೌರವ ಸಲಹೆಗಾರರಾದ ಪ್ರಸಾದ್ ಕುಮಾರ್ ಶೆಟ್ಟಿ, ಮಂಗಳೂರು ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ಉಪಸ್ಥಿತರಿದ್ದರು. ಸಂಚಾಲಕ ಸಚಿನ್ ಶೆಟ್ಟಿ ಸಾಂತ್ಯ ಸ್ವಾಗತಿಸಿ, ಈಶ್ವರ್ ಪ್ರಸಾದ್ ವಂದಿಸಿದರು. ವರುಣ್ ಶೇಣವ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net