ತುಳುನಾಡ ಸಂಸ್ಕೃತಿಯಲ್ಲಿ ಕಂಬಳಕ್ಕೆ ವಿಶೇಷ ಪ್ರಾಧಾನ್ಯ -- ಮಂಗಳೂರು ಕಂಬಳ ಉದ್ಘಾಟಿಸಿ ಎಂ.ವೆಂಕಟೇಶ್ ಅಭಿಮತ

mng-dec28-kambula 2
Published on

ಮಂಗಳೂರು: ತುಳುನಾಡಿನ ಶ್ರೀಮಂತ ಸಂಸ್ಕೃತಿಯಲ್ಲಿ ಕಂಬಳಕ್ಕೆ ವಿಶೇಷ ಪ್ರಾಧಾನ್ಯವಿದೆ. ಮಕ್ಕಳು ನೆಲದ ಸಂಸ್ಕೃತಿ ಅರಿತುಕೊಂಡಾಗ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ಕ್ಯಾ.ಎಂ.ವಿ. ಪ್ರಾಂಜಲ್ ಅವರ ತಂದೆ, ಎಂಆರ್‌ಪಿಎಲ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಹೇಳಿದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ ಸಾರಥ್ಯದಲ್ಲಿ ಬಂಗ್ರಕೂಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿ ಶನಿವಾರ ಆರಂಭಗೊಂಡ ‘ರಾಮ-ಲಕ್ಷ್ಮಣ’ ಮಂಗಳೂರು ಕಂಬಳ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಕ ಮತ್ತು ಜಾನುವಾರುಗಳ ಬದುಕಿನ ನಂಟಿನೊಂದಿಗೆ ಆರಂಭವಾದ ಸಾಂಪ್ರದಾಯಿಕ ಕ್ರೀಡೆ ಕಾಲಕ್ರಮೇಣ ಆಧುನಿಕತೆಗೆ ತೆರೆದುಕೊಳ್ಳುವ ಮೂಲಕ ಇನ್ನಷ್ಟು ಜನಪ್ರಿಯವಾಗುತ್ತಿದೆ. ವಿಶಿಷ್ಟ ಕ್ರೀಡೆಯನ್ನು ಮುಂದಿನ ತಲೆಮಾರಿಗೆ ತಲುಪಿಸಲು ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷ ಕೆ.ಚಿತ್ತರಂಜನ್ ದೀಪ ಪ್ರಜ್ವಲನೆಗೈದರು. ಕ್ಯಾ.ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಕಳೆದ 8 ವರ್ಷಗಳಿಂದ ಆಯೋಜಿಸಲಾಗುತ್ತಿರುವ ಮಂಗಳೂರು ಕಂಬಳ ನಗರದ ಜನತೆಗೆ ಹಾಗೂ ಹೊರ ಊರುಗಳಿಂದ ಬಂದಿರುವವರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ ಎಂದರು.

ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿದ್ದರು. ಕಂಬಳ ಆಯೋಜನೆ ಮೂಲಕ ಪರಂಪರೆ ಉಳಿಸುವ ಪ್ರಯತ್ನದ ಮೂಲಕ ಭೂಮಿಯನ್ನು ರಕ್ಷಣೆ ಮಾಡುತ್ತಿದ್ದಾರೆ. ಭೂಮಿ ಮತ್ತು ದೇಶ ರಕ್ಷಿಸುತ್ತಿರುವ ಸೈನಿಕರನ್ನು ಕಂಬಳದ ವೇದಿಕೆಯಲ್ಲಿ ಸ್ಮರಣೆ ಮಾಡಿರುವುದು ಅರ್ಥಪೂರ್ಣ ಎಂದರು.

ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಮುಖ್ಯ ಅತಿಥಿಯಾಗಿದ್ದರು. ಕಂಬಳ ತುಳುನಾಡಿನ ಆರಾಧನೆ ಮತ್ತು ಆಚರಣೆ ಜತೆಗೆ ಜನಾಕರ್ಷಣೆಯಾಗಿ ಬೆಳೆಯುತ್ತಿದೆ. ಎಲ್ಲ ಜಾತಿ, ಧರ್ಮದ ಜನರನ್ನು ಒಗ್ಗೂಡಿಸುತ್ತಿದೆ. ಯುವ ಜನತೆಗೆ ಹಿರಿಯರ ಕಾಲದ ಸಂಸ್ಕೃತಿಯನ್ನು ಪರಿಚಯಿಸಲು ಈ ಮೂಲಕ ಸಾಧ್ಯವಾಗಿದೆ ಎಂದರು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಮಂಗಳೂರು ರಾಮಕೃಷ್ಣ ಮಠದ ಕಾರ್ಯದರ್ಶಿ ಚಿದಂಬರಾನಂದ ಮಹಾರಾಜ್, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಶುಭ ಹಾರೈಸಿದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಆಶಿಕ್ ಬಳ್ಳಾಲ್ ಕೂಳೂರು ಬೀಡು, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಮಾಜಿ ಅಧ್ಯಕ್ಷ ಕರ್ನಲ್ ಶರತ್ ಭಂಡಾರಿ, ನಿವೃತ್ತ ಸೇನಾಧಿಕಾರಿ ಬ್ರಿಗೇಡಿಯರ್ ಐ.ಎನ್.ರೈ, ಕ್ಯಾ.ದೀಪಕ್ ಅಡ್ಯಂತಾಯ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಮನಪಾ ಪ್ರತಿಪಕ್ಷದ ನಾಯಕ ಅನಿಲ್ ಕುಮಾರ್, ಮನಪಾ ಸದಸ್ಯ ಕಿರಣ್ ಕುಮಾರ್, ಮಾಜಿ ಮೇಯರ್ ಕವಿತಾ ಸನಿಲ್, ರಾಮಕೃಷ್ಣ ಮಿಷನ್‌ನ ಮುಖ್ಯ ಸಂಯೋಜಕ ರಂಜನ್ ಬೆರ್ಳ್ಳಪ್ಪಾಡಿ, ಮನಪಾ ಸದಸ್ಯ ಸಂದೀಪ್ ಗರೋಡಿ, ಅರುಣ್ ಕುಮಾರ್ ಶೆಟ್ಟಿ, ಪಿ.ಆರ್.ಶೆಟ್ಟಿ, ಮಂಗಳೂರು ಕಂಬಳ ಸಮಿತಿ ಗೌರವ ಸಲಹೆಗಾರ ಪ್ರಸಾದ್ ಕುಮಾರ್ ಶೆಟ್ಟಿ, ಜಯರಾಮ ಶೆಟ್ಟಿ ಕುಡುಂಬೂರುಗುತ್ತು ಮೊದಲಾದವರು ಉಪಸ್ಥಿತರಿದ್ದರು.

ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಇತ್ತೀಚೆಗೆ ವೀರ ಮರಣ ಹೊಂದಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಂಬಳ ಸಮಿತಿ ಅಧ್ಯಕ್ಷ ಕ್ಯಾ.ಬ್ರಿಜೇಶ್ ಚೌಟ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ವಂದಿಸಿದರು. ಕೇಶವ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

ಕಲರ್ ಕೂಟ ಚಿತ್ರಕಲೆ ಸ್ಪರ್ಧೆಗೆ ಉತ್ತಮ ಸ್ಪಂದನೆ

ಕಂಬಳದಲ್ಲಿ ಎಳೆ ಮನಸ್ಸುಗಳನ್ನು ಭಾಗಿಗಳಾಗಿಸುವ ಉದ್ದೇಶದಿಂದ ಹಮ್ಮಿಕೊಂಡ ‘ಕಲರ್ ಕೂಟ’ ಚಿತ್ರಕಲಾ ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸ್ಮರಣಿಕೆ ಹಾಗೂ ಆಕರ್ಷಕ ಬಹುಮಾನ ವಿತರಿಸಲಾಯಿತು. ರೀಲ್ಸ್ ಮತ್ತು ಫೋಟೊಗ್ರಫಿ ಸ್ಪರ್ಧೆಯಲ್ಲೂ ನೂರಾರು ಮಂದಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net