ಯಕ್ಷಗಾನ ಹಿರಿಯ ಕಲಾವಿದರಿಗೆ ಕಲ್ಲಾಡಿ-ಮಂಡೆಚ್ಚ ಪ್ರಶಸ್ತಿ ಪ್ರದಾನ

mng--29 Oct Kalladi award
Published on

ಮಂಗಳೂರು: ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ ಇರಾ ಕುಂಡಾವು ಇದರ ಆಶ್ರಯದಲ್ಲಿ ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಭಾನುವಾರ ನಡೆಯಿತು.

ಹಿರಿಯ ಯಕ್ಷಗಾನ ಕಲಾವಿದ ಜಪ್ಪು ದಯಾನಂದ ಶೆಟ್ಟಿ ಅವರಿಗೆ ಕಲ್ಲಾಡಿ ವಿಠಲ ಶೆಟ್ಟಿ ಪ್ರಶಸ್ತಿ ಪ್ರದಾನಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದ ಮಾಡಾವು ಕೊರಗಪ್ಪ ರೈ ಅವರಿಗೆ ದಿ.ವಿದ್ವಾನ್ ದಾಮೋದರ ಮಂಡೆಚ್ಚ ಪ್ರಶಸ್ತಿ ನೀಡಲಾಯಿತು.

‘ಕಲ್ಲಾಡಿ ವಿಠಲ ಶೆಟ್ಟಿ ಅವರು ಯಕ್ಷಗಾನ ಲೋಕದ ಅವಿಚ್ಛನ್ನ ಶಕ್ತಿಯಾಗಿ ಸ್ಪೂರ್ತಿ ಹಾಗೂ ಪ್ರೋತ್ಸಾಹದ ದ್ಯೋತಕವಾಗಿ ನಡೆಸಿದ ಯಕ್ಷಸೇವೆ ಅದ್ವಿತೀಯ. ಕಲ್ಲಾಡಿ ಪರಂಪರೆಯು ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಕಾರ್ಯ ಅವಿಸ್ಮರಣೀಯ’ ಎಂದು ಯಕ್ಷಗಾನದ ಹಿರಿಯ ಕಲಾವಿದ ತಾರನಾಥ ಬಲ್ಯಾಯ ವರ್ಕಾಡಿ ಅವರು ಸಂಸ್ಮರಣಾ ಭಾಷಣ ಮಾಡಿದರು.

ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಕಲ್ಲಾಡಿ ದೇವೀಪ್ರಸಾದ್ ಶೆಟ್ಟಿ, ಅಧ್ಯಕ್ಷ ಗಣೇಶ್ ಕೊಟ್ಟಾರಿ ಸಂಪಿಲ, ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಜಯರಾಜ್ ಕುಂಡಾವು, ಪ್ರಮುಖರಾದ ಶೃತಕೀರ್ತಿರಾಜ್, ಜಗದೀಶ್ ಶೆಟ್ಟಿ ಇರಾಗುತ್ತು, ಜಯರಾಮ ಪೂಜಾರಿ ಸೂತ್ರಬೈಲ್ ಮುಂತಾದವರು ಉಪಸ್ಥಿತರಿದ್ದರು.

ಟ್ರಸ್ಟ್ ಕಾರ್ಯದರ್ಶಿ ಪುಷ್ಪರಾಜ್ ಕುಕ್ಕಾಜೆ ಸ್ವಾಗತಿಸಿ, ಪ್ರಸ್ತಾವಿಸಿದರು. ಚಂದ್ರಹಾಸ್ ಶೆಟ್ಟಿ ಬಾಲಾಜಿಬೈಲ್ ಸನ್ಮಾನಿತರ ಪರಿಚಯ ಮಾಡಿದರು. ಯತಿರಾಜ್ ಶೆಟ್ಟಿ ಸಂಪಿಲ ವಂದಿಸಿದರು. ಸುರೇಶ್ ಕೊಟ್ಟಾರಿ ನಿರೂಪಿಸಿದರು.

ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ‘ದ್ರೌಪದಿ ಪ್ರತಾಪ’ ಯಕ್ಷಗಾನ ಬಯಲಾಟ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net