

ವಿಜಯವಾಣಿ ಸುದ್ದಿಜಾಲ ಮಂಗಳೂರು
ತೈಲ ವರ್ಣ ಚಿತ್ರ, ಪೆನ್ಸಿಲ್ ಆರ್ಟ್, ಅಕ್ರೇಲಿಕ್, ಲೈನ್ ಆರ್ಟ್, ಸಿರಾಮಿಕ್ ಆರ್ಟ್, ಪೊಟ್ರೇಟ್, ನೇಚರ್ ಪೈಂಟಿಂಗ್, ಕ್ಯಾರಿ ಕೇಚರ್, ಬಾಲ್ ಪೆನ್ ಶೇಡಿಂಗ್, ಕರಾವಳಿಯ ಭೂತಕೋಲ, ಕಂಬಳ, ಯಕ್ಷಗಾನಗಳನ್ನು ಬಣ್ಣಗಳಲ್ಲಿ ತುಂಬಿದ ಅಕ್ರೆಲಿಕ್ ಕಲಾಕೃತಿ, ಕೇರಳದ ದೇವಸ್ಥಾನಗಳ ಗೋಡೆಗಳನ್ನು ಸಾಮಾನ್ಯವಾಗಿ ಅಲಂಕರಿಸುವ ಮ್ಯೂರಲ್ ಪೈಂಟಿಂಗ್...
ಮಂಗಳೂರಿನ ಶರಧಿ ಪ್ರತಿಷ್ಠಾನ, ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಕದ್ರಿಯ ಉದ್ಯಾನವನದ ನಡುವಿನ ರಸ್ತೆಯ ಇಕ್ಕೆಲಗಳಲ್ಲಿ ಅನಾವರಣಗೊಂಡ ಕಲೆಯ ಬಹುಮಾಧ್ಯಮದ ಕಲಾಪರ್ಬ ಭಾನುವಾರ ಸಹಸ್ರಾರು ಕಲಾಭಿಮಾನಿಗಳ ಸಮಕ್ಷಮದಲ್ಲಿ ಸಂಪನ್ನಗೊಂಡಿತು.
ಪರಿಚಯವಿಲ್ಲದ ಕಲಾ ಪ್ರಕಾರದ ಕುರಿತು ಮಕ್ಕಳ ಜತೆ ಕಲಾವಿದರಲ್ಲಿ ಮಾಹಿತಿ ಪಡೆಯುತ್ತಿರುವ ಪಾಲಕರು, ಉದಯೋನ್ಮುಖ ಕಲಾವಿದರು, ಅಪೇಕ್ಷೆ ಪಟ್ಟವರನ್ನು ಎದುರಿನಲ್ಲಿ ಕುಳ್ಳಿರಿಸಿ ಸ್ಥಳದಲ್ಲೇ ಪೊಟ್ರೇಟ್, ಪೆನ್ಸಿಲ್ ಚಿತ್ರ ಬರೆಯುವ ಅನುಭವಿ ಕಲಾವಿದರು, ತಮಗಿಷ್ಟವಾದ ಕಲಾಕೃತಿಗಳ ಮುಂಭಾಗ ನಿಂತು ಫೋಟೋ ತೆಗೆಸಿಕೊಳ್ಳುವವರು, ಬೆರಗುಕಣ್ಣುಗಳಿಂದ ಈ ವಿಸ್ಮಯ ಲೋಕವನ್ನು ಕಣ್ಣುತುಂಬಿಕೊಳ್ಳುವ ಪುಟಾಣಿಗಳು ಚಿತ್ರಸಂತೆಯ ಸಾರ್ಥಕತೆಗೆ ಸಾಕ್ಷಿಯಾದರು.
ಹಿರಿಯ ವ್ಯಂಗ್ಯಚಿತ್ರ ಕಲಾವಿದ ಜಾನ್‌ಚಂದ್ರನ್ ಅವರ ತಮ್ಮ ಚಿತ್ರಗಳ ಪ್ರತ್ಯೇಕ ಸ್ಟಾಲ್ ಮುಂಭಾಗ ಆಸಕ್ತರು ಫೋಟೋ ತೆಗೆಸಿಕೊಳ್ಳುವ ಸಲುವಾಗಿಯೇ ನಿರ್ಮಿಸಿದ ಸೆಲ್ಫಿ ಸ್ಟಾೃಂಡ್ ಗಮನ ಸೆಳೆಯಿತು.
ಬಹು ಮಾಧ್ಯಮದ ಕಲಾಕೃತಿಗಳನ್ನು ಒಂದೇ ಕಡೆ ಆಸ್ವಾದಿಸುವ ಹಾಗೂ ಆಸಕ್ತರಿಗೆ ಕೊಂಡುಕೊಳ್ಳುವ ಅವಕಾಶವನ್ನು ಮಂಗಳೂರಿನಲ್ಲಿ ಎರಡು ದಿನ ಜರುಗಿದ ಚಿತ್ರಸಂತೆ ಒದಗಿಸಿದೆ. ಸ್ಮಾರ್ಟ್ ಸಿಟಿ ಯೋಜನೆ ಮೂಲಕ ನವೀಕರಣಗೊಂಡಿರುವ ಕದ್ರಿ ಉದ್ಯಾನವನ ಹಾಗೂ ನಡುವಿನ ರಸ್ತೆ ಚಿತ್ರಕಲಾ ಪ್ರದರ್ಶನಕ್ಕೆ ಪೂರಕವಾಗಿದೆ ಎಂದು ಚಿತ್ರಕಲಾ ಪ್ರದರ್ಶನಕ್ಕಾಗಿಯೇ ಬೆಂಗಳೂರಿನಿಂದ ಆಗಮಿಸಿದ ದಕ್ಷಿಣ ಕನ್ನಡದ ಕಲಾವಿದ ವಿಕಾಸ್ ಅಂಬ್ಲಮೊಗರು ಪ್ರತಿಕ್ರಿಯಿಸಿದ್ದಾರೆ.
ಕಲಾಪರ್ಬದಲ್ಲಿ ಇದ್ದ 118 ಮಳಿಗೆಗಳಿದ್ದವು. ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳು ಹಳೇ ಪತ್ರಿಕೆಗಳನ್ನು ಬಳಸಿಕೊಂಡು ಪ್ರತಿಕೃತಿ ರಚಿಸಿದ್ದಾರೆ. ಅದರ ಮೂಲಕ ಸಾರ್ವಜನಿಕ ಜಾಗದಲ್ಲಿ ಎಸೆದ ಪ್ಲಾಸ್ಟಿಕ್ ವಸ್ತುಗಳನ್ನು ಪ್ರಾಣಿಗಳು ಸೇವಿಸಿ ಉಂಟಾಗುವ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ಪ್ರಯತ್ನಿಸಿದ್ದಾರೆ. ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸಿ.ಇ.ಕಾಮತ್ ಕುಶಲಕರ್ಮಿಗಳ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಮರ, ಲೋಹ ಹಾಗೂ ಕಲ್ಲಿನಿಂದ ಶಿಲ್ಪ ತಯಾರಿಸಿದ್ದಾರೆ. ವೀಣಾ ಐತಾಳ್ ಅವರು ವಿವಿಧ ಬಣ್ಣಗಳನ್ನು ಬಳಸಿಕೊಂಡು ಯಕ್ಷಗಾನ ಕಲಾವಿದ ಸಂಜಯ್ ಬೆಳೆಯೂರು ಅವರು ರಂಗೋಲಿ ಬಿಡಿಸಿದ್ದಾರೆ. ಪೆನ್ಸಿಲ್ ಲೆಡ್‌ನಲ್ಲಿ ಪ್ರಶಾಂತ್ ಆಚಾರ್ಯ ಅವರು ತಯಾರಿಸಿರುವ, ಚಿತ್ರಾಪುರದ ಪದ್ಮಾ ಕರ್ಕೇರ ಅವರು ಚಿಪ್ಪುಗಳನ್ನು ಬಳಸಿಕೊಂಡು, ಬಿಜೈನ ಜೇನ್ ನೊರೋನ್ಹಾ ಅವರು ಕಾಫಿ ಪುಡಿಯಲ್ಲಿ ರಚಿಸಿರುವ ಕಲಾಕೃತಿಗಳು ಗಮನ ಸೆಳೆದವು.
-----
ಇದು ಮಂಗಳೂರಿನಲ್ಲಿ ಕಲೆಯ ವಾತಾವರಣವನ್ನು ಬಡಿದೆಬ್ಬಿಸಿದ ಒಂದು ಕಾರ್ಯಕ್ರಮ ಎಂದು ಹೇಳಬಹುದು. ಕಲೆಯ ಆಸ್ವಾದಕರ ಸಂಭ್ರಮ ಎಲ್ಲೆಡೆ ಕಾಣುತ್ತಿತ್ತು. ಮಂಗಳೂರಿನಲ್ಲಿ 2017ರಲ್ಲಿ ಜರುಗಿದ ಕಲಾಮೇಳ ಬಳಿಕ ಒಂದು ದೊಡ್ಡ ಅಂತರ ಉಂಟಾಗಿತ್ತು. ಇಂತಹ ಕಲಾಮೇಳಗಳು ನಿಲ್ಲಬಾರದು. ಮುಂದುವರಿಯಬೇಕು.
ಜಾನ್‌ಚಂದ್ರನ್, ಹಿರಿಯ ಕಲಾವಿದರು