

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಬಳಿ ಬುಧವಾರ ಬೆಳಗ್ಗಿನ ಜಾವ 3.40ರ ಗಂಟೆ ವೇಳೆಗೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಗಾಯಾಳುವನ್ನು ಸ್ಕೂಟರ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದು ಕದ್ರಿ ಠಾಣೆಯ ಮಹಿಳಾ ಕಾನ್‌ಸ್ಟೇಬಲ್ ಮಾನವೀಯತೆ ಮೆರೆದಿದ್ದಾರೆ.
ಕಾನ್‌ಸ್ಟೇಬಲ್ ಮನ್‌ಶಿದಾ ಬಾನು ಮಾನವೀಯತೆ ಮೆರೆದವರು. ಬೆಳಗ್ಗಿನ ಜಾವ 3.55ರ ವೇಳೆಗೆ ತನ್ನ ಮನೆಯಿಂದ ಕರ್ತವ್ಯಕ್ಕೆ ಹಾಜರಾಗಲು ಠಾಣೆಗೆ ತೆರಳುತ್ತಿದ್ದಾಗ ಕೆಪಿಟಿ ಬಳಿ ಕೋಳಿ ಸಾಗಾಟ ಮಾಡುತ್ತಿದ್ದ ಕೇರಳ ನೋಂದಣಿಯ ಪಿಕಪ್ ವಾಹನ ರಸ್ತೆ ಬದಿ ನಿಂತಿದ್ದ ಕಂಟೈನರ್‌ಗೆ ಡಿಕ್ಕಿಯಾಗಿ ಅದರಲ್ಲಿದ್ದ ಕ್ಲೀನರ್ ಗಂಭೀರ ಗಾಯಗೊಂಡಿದ್ದರು. ಅವರ ಕೈ, ಕಾಲು, ತಲೆ, ತುಟಿ ಮೊದಲಾದ ಕಡೆಗೆ ಗಾಯವಾಗಿ ರಕ್ತಸ್ರಾವವಾಗುತ್ತಿತ್ತು. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಪಿಕಪ್ ಚಾಲಕ ರಸ್ತೆಯಲ್ಲಿ ಸಾಗುತ್ತಿದ್ದ ಹಲವು ವಾಹನದವರನ್ನು ನಿಲ್ಲಿಸಲು ಪ್ರಯತ್ನಿಸಿದರೂ, ಯಾರು ಕೂಡಾ ನಿಲ್ಲಿಸಿರಲಿಲ್ಲ. ರಸ್ತೆಯಲ್ಲಿ ಆಟೋ ಕೂಡಾ ಈ ಸಂದರ್ಭ ಬಂದಿರಲಿಲ್ಲ.
ತಕ್ಷಣ ಸಮಯ ಪ್ರಜ್ಞೆ ಮೆರೆದ ಮನ್‌ಶಿದಾ ಬಾನು ಅವರು ತನ್ನ ಸ್ಕೂಟರ್‌ನ ಹಿಂಬದಿಯಲ್ಲಿ ಗಾಯಾಳುವನ್ನು ಕುಳ್ಳಿರಿಸಿಕೊಂಡು, ಒಂದು ಕೈಯ್ಯಲ್ಲಿ ಅವರನ್ನು ಹಿಡಿದುಕೊಂಡು, ಇನ್ನೊಂದು ಕೈಯ್ಯಲ್ಲಿ ಸ್ಕೂಟರ್ ಹ್ಯಾಂಡಲ್ ಹಿಡಿದುಕೊಂಡು ಎಜೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಅಲ್ಲಿ ತಲುಪಿದಾಗ ಗಾಯಾಳು ರಕ್ತಸ್ರಾವದಿಂದ ಪ್ರಜ್ಞೆ ಕಳೆದುಕೊಂಡಿದ್ದಾರೆ. ವೈದ್ಯರು ತಕ್ಷಣ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಬಳಿಕ ಅಲ್ಲಿಗೆ ಪಿಕಪ್ ಚಾಲಕ ಬಂದು ಮುಂದಿನ ಪ್ರಕ್ರಿಯೆ ನಡೆಸಿದ್ದಾರೆ. ಮನ್‌ಶಿದಾ ಬಾನು ಅವರು ಬಳಿಕ ಠಾಣೆಗೆ ಬಂದು ಕದ್ರಿ ಸಂಚಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮನ್‌ಶಿದಾ ಬಾನು ಅವರು ಇನ್ನೊಂದು ವಾಹನಕ್ಕೆ ಕಾಯದೆ ಸಮಯ ಪ್ರಜ್ಞೆ ಮೆರೆದು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ ಕಾರಣ ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನ್‌ಶಿದಾ ಬಾನು ಕದ್ರಿ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಸಮಯ ಪ್ರಜ್ಞೆ ಹಾಗೂ ಮಾನವೀಯ ಸೇವೆ ಮಾದರಿಯಾಗಿದ್ದು, ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಶ್ಲಾಘಿಸಿದ್ದಾರೆ.