ನ. 11ರಿಂದ 17 ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ಯಕ್ಷಾಂಗಣ ತಾಳಮದ್ದಳೆ ಸಪ್ತಾಹ

kukkuvalli
Published on

ಮಂಗಳೂರು ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷಭಾರತಿ ಪುತ್ತೂರು ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸಲ್ಪಡುವ 12ನೇ ವರ್ಷದ ನುಡಿಹಬ್ಬ ಯಕ್ಷಗಾನ ತಾಳಮದ್ದಳೆ ಸಪ್ತಾಹ ನ.11ರಿಂದ 17ರವರೆಗೆ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ನಡೆಯಲಿದೆ.

ಸಂಘಟನಾ ಪರ್ವ ಎಂಬ ಹೆಸರಿನಲ್ಲಿ ಜಿಲ್ಲೆಯ ವಿವಿಧ ಯಕ್ಷಗಾನ ಸಂಘಗಳ ಸಹಕಾರದಿಂದ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆಯ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಶುಕ್ರವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಪ್ತಾಹದಲ್ಲಿ ವಿವಿಧ ವಿನೂತನ ಯಕ್ಷಗಾನ ಪ್ರಸಂಗಗಳು ಪ್ರಸ್ತುತಗೊಳ್ಳಲಿದ್ದು, ಉದ್ಘಾಟನಾ ಸಮಾರಂಭ ನ. 11ರಂದು ಸಂಜೆ 4.30ಕ್ಕೆ ಗೌರವಾಧ್ಯಕ್ಷ ಡಾ.ಎ.ಜೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಂಬೈ ಮುದ್ಯಮಿ ಕೆ.ಪಿ. ರೈ ಕುತ್ತಿಕ್ಕಾರು ಸಪ್ತಾಹ ಉದ್ಘಾಟಿಸಲಿದ್ದು, ದ.ಕ. ಜಿಲ್ಲಾ ಕಸಪಾ ಮಾಜಿ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಸಂಸ್ಥಾಪಕ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರಿಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಅವರು ಹೇಳಿದರು.

ಡಾ. 17ರಂದು ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಹವ್ಯಾಸಿ ಭಾಗವತ ಹಾಗೂ ಪ್ರಸಂಗಕರ್ತ ಕೆ.ಎಸ್. ಮಂಜುನಾಥ ಶೇರೆಗಾರ ಹರಿಹರಪುರರಿಗೆ 2024ನೆ ಸಾಲಿನ ಯಕ್ಷಾಂಗಣ ಗೌರವ ಪ್ರಶಸ್ತಿ ಪ್ರದಾನ ಮಾಡಲಿರುವರು. ಸಪ್ತಾಹದ ಪ್ರತಿ ದಿನ ಯಕ್ಷಗಾನಕ್ಕಾಗಿ ದುಡಿದ ಹಿರಿಯ ಚೇತನಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ನ. 17ರಂದು ಬೆಳಗ್ಗೆ 10.30ಕ್ಕೆ ತುಳು ಯಕ್ಷಗಾನ ವಿಚಾರಗೋಷ್ಠಿ- ‘ತುಳು ಆಟೋ- ಪ್ರಸಂಗ ಬೊಕ್ಕ ಪ್ರಯೋಗ’ ಏರ್ಪಡಿಸಲಾಗಿದೆ ಎಂದು ಅವರು ವಿವರಿಸಿದರು.

ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಂಚಾಲಕರಾದ ರವೀಂದ್ರ ರೈ ಕಲ್ಲಿಮಾರ್, ನಿವೇದಿತಾ ಎನ್. ಶೆಟ್ಟಿ, ಕಾರ್ಯದರ್ಶಿಗಳಾದ ಕೆ. ಲಕ್ಷ್ಮೀ ನಾರಾಯಣ ರೈ ಹರೇಕಳ, ಸುಮಾ ಪ್ರಸಾದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net