ಕದ್ರಿ ಉದ್ಯಾನವನ ಕಣ್ಮನ ಸೆಳೆಯುವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

mng-jan23-kadri2
Published on

ಮಂಗಳೂರು: ಕದ್ರಿ ಉದ್ಯಾನವನ ಪ್ರವೇಶಿಸುತ್ತಿದ್ದಂತೆ ಸ್ವಾಗತ ನೀಡುವ ಬಣ್ಣ ಬಣ್ಣದ ಹೂವುಗಳು, ಹೂವುಗಳಿಂದ ನಿರ್ಮಿಸಿದ ಕಲಾಕೃತಿಗಳು, ಚಪ್ಪರ ತುಂಬಾ ನಳನಳಿಸುವ ತರಹೇವಾರಿ ತರಕಾರಿ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ತಿಂಡಿ ತಿನಿಸುಗಳ ಮಳಿಗೆಗಳು, ಗಮನ ಸೆಳೆಯುವ ತರಕಾರಿ ಕೆತ್ತನೆಗಳು, ಮೌಲ್ಯವರ್ಧಿತ ಹಾಗೂ ಸಾವಯವ ಉತ್ಪನ್ನಗಳು ಆಕರ್ಷಣೀಯವಾಗಿವೆ.

ಇದು ತೋಟಗಾರಿಕೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಹಾಗೂ ಸಿರಿ ತೋಟಗಾರಿಕೆ ಸಂಘ ಮಂಗಳೂರು ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ಜ.23 ರಿಂದ 26ರ ತನಕ ಕದ್ರಿ ಉದ್ಯಾನವನದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದ ಸುಂದರ ದೃಶ್ಯ.

ಸಂಸದ ಕ್ಯಾ.ಬ್ರಿಜೇಶ್ ಚೌಟ ಪ್ರದರ್ಶನ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೇಯರ್ ಮನೋಜ್ ಕೋಡಿಕಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಒ ಡಾ.ಆನಂದ್ ಕೆ., ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಮಂಜುನಾಥ ಡಿ., ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್ ಸಿ.ಎಂ., ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರಾದ ಗೋಪಾಲಕೃಷ್ಣ ಭಟ್, ಬಿ.ಜೆ.ಗಾಂಭೀರ್, ರಾಮ ಮುಗ್ರೋಡಿ, ಸಿರಿ ತೋಟಗಾರಿಕಾ ಸಂಘದ ಉಪಾಧ್ಯಕ್ಷೆ ಡಾ.ನಿರ್ಮಲಾ ಮೊದಲಾದವರು ಉಪಸ್ಥಿತರಿದ್ದರು.

ಪುಷ್ಪಕಲಾಕೃತಿಗಳ ಪ್ರದರ್ಶನ:

ಫಲಪುಷ್ಪ ಪ್ರದರ್ಶನದ ಅಂಗವಾಗಿ ಮುಖ್ಯ ಆಕರ್ಷಣೆಯಾಗಿ ಸುಮಾರು 2 ಲಕ್ಷ ಹೂವುಗಳಿಂದ ಅಲಂಕರಿಸಿ ಐಫೇಲ್ ಟವರನ್ನು ಸುಮಾರು 22 ಅಡಿ ಎತ್ತರ, 12 ಅಡಿ ಸುತ್ತಳತೆಯಲ್ಲಿ ನಿರ್ಮಿಸಲಾಗಿದೆ. ಇದರ ಜೊತೆಗೆ ಮಕ್ಕಳಿಗೆ ಮನರಂಜನೆ ನೀಡುವಂತಹ ಹೂವುಗಳಿಂದ ಅಲಂಕರಿಸಿದ ಫೋಟೋ ಪ್ರೇಮ್, ಸೆಲ್ಫಿ ರೆನ್ ಮಾದರಿ, ಮಶ್ರೂಮ್, ಕೆನನ್ ಬಾಲ್, ಜೇನು ನೊಣ, ಮಿಕಿ ಮೌಸ್ ಗಮನ ಸೆಳೆಯುತ್ತಿವೆ.

ಸಿರಿ ದಾನ್ಯ ಮತ್ತು ಅಲಂಕಾರಿಕಾ ಎಲೆಗಳಿಂದ ಕಂಬಳ ಕೋಣದ ಮಾದರಿ, ಯಕ್ಷಗಾನ ವೇಷಧಾರಿಯ ಕಲಾಕೃತಿ, ಮೀನುಗಾರರ ಮತ್ತು ಕಂಬಳ ಓಟಗಾರನ ಕಲಾಕೃತಿ ಸುಂದರವಾಗಿ ಮೂಡಿ ಬಂದಿದೆ.

ಸುಮಾರು 20,000ಕ್ಕಿಂತಲೂ ಅಧಿಕ ಮೂವತ್ತಕ್ಕೂ ಹೆಚ್ಚು ವಿವಿಧ ಜಾತಿಯ ಪುಷ್ಪಗಳ ಜೋಡಣೆ, ತರಕಾರಿ ಕೈ ತೋಟ ಪ್ರಾತ್ಯಕ್ಷತೆ.

ಹಣ್ಣು ಮತ್ತು ತರಕಾರಿಗಳಿಂದ ಜಿಲ್ಲೆಯ ಪ್ರಾಮುಖ್ಯತೆಯ ಬಗ್ಗೆ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರುಗಳ ಕಲಾಕೃತಿಗಳನ್ನು ಕೆತ್ತನೆ

ವಿವಿಧ ಜೇನು ಸಹಕಾರ ಸಂಘ, ರೈತ ಉತ್ಪಾದಕರ ಸಂಸ್ಥೆಗಳಿಂದ ಜೇನಿನ ವಿವಿದ ತಳಿಗಳ, ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಜೇನಿನ ಔಷಧೀಯ ಗುಣಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಪಿಲಿಕುಳ ಜೈವಿಕ ಉದ್ಯಾನವನದವರಿಂದ ಪಶ್ಚಿಮ ಘಟ್ಟದ ಪ್ರಮುಖ ಸಸ್ಯ ಪ್ರಭೇದಗಳು ಮತ್ತು ಮಾಹಿತಿ, ಔಷದೀಯ ಗಿಡಗಳ ಪ್ರದರ್ಶನ ಮತ್ತು ಮಹತ್ವ ಹಾಗೂ ರೈತ ಉತ್ಪಾದಕರ ಸಂಸ್ಥೆಗಳಿಂದ ವಿವಿದ ದೇಶಿ ಸೀಡ್ಸ್‌ಗಳಿವೆ.

ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ತೋಟಗಾರಿಕೆಗೆ ಸಂಬಂಧಪಟ್ಟ ಉದ್ದಿಮೆದಾರರು, ಯಂತ್ರೋಪಕರಣಗಳ ಮಾರಾಟಗಾರರು, ಸಾವಯವ ಉತ್ಪನ್ನಗಳ ಮಳಿಗೆಗಳು ಇಲ್ಲಿವೆ. 1 ರೂಪಾಯಿಗೆ ಒಂದು ಗಿಡ ವಿತರಿಸಲಾಗುತ್ತಿದೆ.

ಜಿಲೆಯ ಪ್ರಗತಿಪರ ರೈತರು ಬೆಳೆದಿರುವಂತಹ ವಿಶಿಷ್ಟ ಬಗೆಯ ಹಣ್ಣು, ತರಕಾರಿ, ತೋಟದ ಬೆಳೆಗಳು,ಸಾಂಬಾರು ಬೆಳೆಗಳನ್ನು ಪ್ರದರ್ಶನಕ್ಕಿಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net