ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ದೇವರ ಸೇವೆಕದ್ರಿ ಕ್ರಿಕೆಟರ್ಸ್, ಆಸರೆ ಫ್ರೆಂಡ್ಸ್ ವತಿಯಿಂದ ಅಕ್ಕಿ ವಿತರಿಸಿ ಪದ್ಮರಾಜ್ ಆರ್. ಅಭಿಮತ

kadri
Published on

ಮಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಅಕ್ಕಿ ವಿತರಣೆ ಮಾಡುತ್ತಿರುವ ಕದ್ರಿ ಕ್ರಿಕೆಟರ್ಸ್, ಆಸರೆ ಫ್ರೆಂಡ್ಸ್ ಕಾರ್ಯ ದೇವರ ಸೇವೆಗೆ ಸಮಾನ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ನೀಡಿರುವ ಅಕ್ಕಿಯಿಂದ ಸಂತಸದಿಂದ ಹಬ್ಬವನ್ನು ಆಚರಿಸಲು ಇದರಿಂದ ಸಾಧ್ಯವಾಗಲಿದೆ ಎಂದು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಹೇಳಿದರು.


ಕದ್ರಿ ಶಾಲೆಯಲ್ಲಿ ಭಾನುವಾರ ಕದ್ರಿ ಕ್ರಿಕೆಟರ್ಸ್ ಕ್ಲಬ್ ಹಾಗೂ ಆಸರೆ ಫ್ರೆಂಡ್ಸ್ ಮಂಗಳೂರು ಇದರ ಜಂಟಿ ಆಯೋಜನೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 11ನೇ ವರ್ಷದ ಅಕ್ಕಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಕಿಶೋರ್ ಡಿ. ಶೆಟ್ಟಿ ಮಾತನಾಡಿ, ಸಾಮಾಜಿಕ ಧಾರ್ಮಿಕ ಸೇವೆಯಲ್ಲಿ ಸದಾ ಮುಂದಿರುವ ಕದ್ರಿ ಕ್ರಿಕೆಟರ್ಸ್ ಸಂಘಟನೆಯ ಈ ನಡೆ ಸ್ತುತ್ಯರ್ಹವಾದುದು. ಸಮಾಜದಲ್ಲಿ ಆರ್ಥಿಕ ಶ್ರೀಮಂತಿಕೆ ಇಲ್ಲದವರು ಬಡವರಲ್ಲ ಹೃದಯ ಶ್ರೀಮಂತಿಕೆ ಇಲ್ಲದವರು ಮಾತ್ರ ಬಡವರು. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಯಾರೂ ಮುಜುಗರ ಪಡಬೇಕಿಲ್ಲ ಎಂದರು.


ಸಂಘಟನೆಯಲ್ಲಿ ಸದಸ್ಯರಾಗಿದ್ದ ದಿ. ರಾಜೇಶ್ ಕೋಟ್ಯಾನ್ ಅವರ ಮನೆ ನಿರ್ಮಾಣಕ್ಕೆ ಕದ್ರಿ ಕ್ರಿಕೆಟರ್ಸ್ ಮುಂದಾಗಿದ್ದು ಮನೆಯ ನೀಲನಕ್ಷೆಯನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.
ಸಾಮಾಜಿಕ ಸೇವೆಯಲ್ಲಿ ತೊಡಗಿರುವ ರಾಮ ಹೊಳ್ಳ ಅವರನ್ನು ಸನ್ಮಾನಿಸಲಾಯಿತು.


ಮನಪಾ ಮಾಜಿ ಸದಸ್ಯ ಅಶೋಕ್ ಡಿ.ಕೆ., ಬಿಜೆಪಿ ಮುಖಂಡ ಫೆಡ್ರಿಕ್ ಪೌಲ್, ಯಕ್ಷಗಾನ ಅಕಾಡೆಮಿ ಸದಸ್ಯ ಮೋಹನ್ ಕೊಪ್ಪಲ, ಸೂರಜ್ ಆಚಾರ್ಯ, ಬಿಲ್ಡರ್ ಲಕ್ಷ್ಮೀಶ್ ಭಂಡಾರಿ, ಕದ್ರಿ ಕ್ರಿಕೆಟರ್ಸ್ ಕ್ಲಬ್ ಅಧ್ಯಕ್ಷ ದೀಪಕ್ ಸಾಲಿಯಾನ್, ಆಸರೆ ಫ್ರೆಂಡ್ಸ್ ಅಧ್ಯಕ್ಷ ದಿನೇಶ್, ಗೋಕುಲ್ ಕದ್ರಿ, ಪ್ರದೀಪ್ ಆಳ್ವ ಕದ್ರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net