ಪ್ರಯಾಣಿಕರಿಗೆ ತತ್ಕಾಲ್ ಬರೆ; ಮಂಗಳೂರು-ಉತ್ತರ ಕರ್ನಾಟಕ ಸಂಪರ್ಕಿಸುವ ಏಕೈಕ ರೈಲು ವಿಜಯಪುರ ಎಕ್ಸ್‌ಪ್ರೆಸ್ ದುಬಾರಿ

mng vijayapura
Published on

ಪ್ರಕಾಶ್ ಮಂಜೇಶ್ವರ ಮಂಗಳೂರು
ಸಾಮಾನ್ಯವಾಗಿ ಗಣೇಶ ಚತುರ್ಥಿ, ದೀಪಾವಳಿ ಮುಂತಾದ ಹಬ್ಬಗಳು ಹಾಗೂ ಬೇಸಿಗೆ ರಜಾ ಅವಧಿಯಲ್ಲಿ ನಿರ್ದಿಷ್ಟ ಮಾರ್ಗಗಳಲ್ಲಿ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ತತ್ಕಾಲ್ ದರದಲ್ಲಿ ಸ್ಪೆಷಲ್ ರೈಲುಗಳನ್ನು ಇಲಾಖೆ ಓಡಿಸುತ್ತದೆ. ಆದರೆ ಪ್ರಯಾಣಿಕರ ಅಧಿಕ ಬೇಡಿಕೆ ಇರುವ ಮಂಗಳೂರು ಜಂಕ್ಷನ್ ಮತ್ತು ವಿಜಯಪುರ ನಡುವೆ ಒಂದು ಎಕ್ಸ್‌ಪ್ರೆಸ್ ರೈಲು ತತ್ಕಾಲ್ ಪ್ರಯಾಣ ದರದಲ್ಲಿ ಎರಡು ವರ್ಷಗಳಿಂದ ಸಂಚರಿಸುತ್ತಿವೆ. ತತ್ಕಾಲ್ ದರವೆಂದರೆ ಸಾಮಾನ್ಯ ಪ್ರಯಾಣ ದರಕ್ಕಿಂತ ಸುಮಾರು ಎರಡು ಪಟ್ಟು ಇರುತ್ತದೆ.
ಶೈಕ್ಷಣಿಕ ಅಗತ್ಯ, ವೈದ್ಯಕೀಯ ಸೇವೆ, ಔದ್ಯೋಗಿಕ ಅಗತ್ಯಗಳಿಗೆ ದೊಡ್ಡ ಸಂಖ್ಯೆಯ ಪ್ರಯಾಣಿಕರು ನಿಯಮಿತವಾಗಿ ಉತ್ತರ ಕರ್ನಾಟಕ ಹಾಗೂ ವಿಜಯಪುರ ಮಧ್ಯೆ ಸಂಚರಿಸುತ್ತಿದ್ದಾರೆ. ಈ ಮಾರ್ಗದಲ್ಲಿ ಇರುವ ಏಕೈಕ ರೈಲು ಪ್ರಯಾಣ ದುಬಾರಿಯಾಗಿದ್ದು, ಈ ರೈಲಿನ ವೇಳಾಪಟ್ಟಿ ಪ್ರಯಾಣಿಕ ಸ್ನೇಹಿಯಾಗಿಲ್ಲ ಎಂಬ ಆಕ್ಷೇಪಗಳು ಆರಂಭದಿಂದಲೂ ಇವೆ.
ವಿಜಯಪುರ-ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ಸ್ಪೆಷಲ್ (07377/ 07378) ರೈಲು ಸೇವೆಯನ್ನು ಅಧಿಕ ಪ್ರಯಾಣಿಕರು ಉಪಯೋಗಿಸುತ್ತಿದ್ದು, ಕಾಯಂಗೊಳಿಸುವಂತೆ ನೈಋತ್ಯ ರೈಲ್ವೆ ಈ ಹಿಂದೆಯೇ ಎರಡು ಬಾರಿ ರೈಲ್ವೆ ಮಂಡಳಿಗೆ ಶಿಫಾರಸು ಮಾಡಿತ್ತು. 2022 ಹಾಗೂ 2023ರಲ್ಲಿ (ಎರಡು ಬಾರಿ) ನಡೆದ ಭಾರತೀಯ ರೈಲ್ವೆ ವೇಳಾಪಟ್ಟಿ ಸಮಿತಿ (ಐಆರ್‌ಟಿಟಿಸಿ) ಸಭೆಗಳು ಕೂಡ ಈ ರೈಲು ಸೇವೆ ಕಾಯಂಗೊಳಿಸುವಂತೆ ರೈಲ್ವೆ ಮಂಡಳಿಗೆ ಶಿಫಾರಸು ಮಾಡಿತ್ತು.

* ಸಂಸದರ ಪತ್ರ: ಮಂಗಳೂರು, ಹುಬ್ಬಳ್ಳಿ, ವಿಜಯಪುರ ಪ್ರಯಾಣಿಕರ ಸಂಘಗಳು, ದಕ್ಷಿಣ ಕನ್ನಡ ಹಾಗೂ ವಿಜಯಪುರ ಸಂಸದರು ಈ ರೈಲು ಸೇವೆಯನ್ನು ಕಾಯಂಗೊಳಿಸುವುದರ ಜತೆಗೆ ಮಂಗಳೂರು ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ. ವಿಜಯಪುರ ಎಕ್ಸ್‌ಪ್ರೆಸ್ ಸ್ಪೆಷಲ್ ಎರಡು ವರ್ಷಗಳಿಂದ ತತ್ಕಾಲ್ ದರದಲ್ಲಿ ಸಂಚರಿಸುತ್ತಿದ್ದು, ಕಳೆದ ವರ್ಷ ಸೆಪ್ಟೆಂಬರ್ 12ರಂದು ನೈಋತ್ಯ ರೈಲ್ವೆ ಕಳುಹಿಸಿದ ಪ್ರಸ್ತಾವನೆಯಂತೆ ಇದನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ವಿಜಯಪುರ ಸಂಸದ ರಮೇಶ್ ಸಿ.ಜಿಗಜಿಣಗಿ ಸೆ.11ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.

ವೇಳಾಪಟ್ಟಿ ಪರಿಷ್ಕರಣೆಗೆ ಮನವಿ
ಪ್ರಸ್ತುತ ವಿಜಯಪುರ ಎಕ್ಸ್‌ಪ್ರೆಸ್ ಹುಬ್ಬಳ್ಳಿಯಿಂದ ಸಾಯಂಕಾಲ 6.35ಕ್ಕೆ ಹೊರಟು ಹುಬ್ಬಳ್ಳಿಗೆ ರಾತ್ರಿ 11.55 ಹಾಗೂ ಮರುದಿನ ಮಧ್ಯಾಹ್ನ 12.40ಕ್ಕೆ ಮಂಗಳೂರು ಜಂಕ್ಷನ್ ತಲುಪುತ್ತದೆ. ಮಧ್ಯಾಹ್ನ 2.50ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ಬೆಳಗ್ಗೆ 9.35ಕ್ಕೆ ವಿಜಯಪುರ ತಲುಪುತ್ತಿದೆ. ಈ ವೇಳಾಪಟ್ಟಿ ಪ್ರಯಾಣಿಕರಿಗೆ ಅನುಕೂಲಕರವಾಗಿಲ್ಲ. ಈ ವೇಳಾಪಟ್ಟಿಯ ಬದಲು ವಿಜಯಪುರದಿಂದ ಸಾಯಂಕಾಲ 4ಕ್ಕೆ ಹೊರಟು, ಹುಬ್ಬಳ್ಳಿಗೆ ರಾತ್ರಿ 9.30 ಮತ್ತು ಮಂಗಳೂರು ಜಂಕ್ಷನ್‌ಗೆ ಮರುದಿನ ಬೆಳಗ್ಗೆ 9.30ಕ್ಕೆ ತಲುಪಬೇಕು. ಸಾಯಂಕಾಲ 5ಕ್ಕೆ ಮಂಗಳೂರು ಜಂಕ್ಷನ್‌ನಿಂದ ಪ್ರಯಾಣ ಆರಂಭಿಸಿ ಮರುದಿನ ಬೆಳಗ್ಗೆ 5ಕ್ಕೆ ಹುಬ್ಬಳ್ಳಿ ಮತ್ತು 10.30ಕ್ಕೆ ವಿಜಯಪುರ ತಲುಪುವಂತೆ ವೇಳಾಪಟ್ಟಿ ಪರಿಷ್ಕರಿಸುವಂತೆ ವಿವಿಧ ಪ್ರಯಾಣಿಕರ ಸಂಘಟನೆಗಳು ಒತ್ತಾಯಿಸಿವೆ. ಈ ರೀತಿ ವೇಳಾಪಟ್ಟಿ ಪರಿಷ್ಕರಿಸುವುದರಿಂದ ರೈಲಿನಲ್ಲಿ ಪ್ರಯಾಣಿಸುವವರು ಕಚೇರಿ ಕೆಲಸ ಮುಗಿಸಿಕೊಳ್ಳಲು ಅನುಕೂಲ ಎನ್ನುವುದು ಸಂಘಟನೆಗಳ ಅಭಿಪ್ರಾಯ.

--- ಕೋಟ್ ---
ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ರೈಲನ್ನು ಹೆಚ್ಚಿನ ಪ್ರಯಾಣಿಕರು ಉಪಯೋಗಿಸುತ್ತಿದ್ದು, ನೈಋತ್ಯ ರೈಲ್ವೆಯ ಪ್ರಸ್ತಾವನೆಯಂತೆ ಈ ಸೇವೆಯನ್ನು ಕಾಯಂಗೊಳಿಸುವುದು ಆವಶ್ಯಕ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿ ಪರಿಷ್ಕರಣೆ ಕೂಡ ಅವಶ್ಯಕ.
ರಮೇಶ್ ಸಿ.ಜಿಗಜಿಣಗಿ, ಸಂಸದ, ವಿಜಯಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net