

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೌದಿ ಅರೇಬಿಯಾದ ಜೆಡ್ಡಾ ಮತ್ತು ಯಎಇಯ ಶಾರ್ಜಾಕ್ಕೆ ಹೊಸ ವಿಮಾನ ಸೇವೆ ಆರಂಭಿಸಲು ಸಿದ್ಧತೆ ನಡೆದಿದೆ.
ಈ ಸಂಬಂಧ ದೇಶದ ವಿಮಾನ ಯಾನ ಸಂಸ್ಥೆಗಳೊಂದಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದು, ದೋಹಾ, ಅಬುಧಾಬಿ ಮತ್ತು ಕುವೈತ್‌ಗೆ ಹೆಚ್ಚುವರಿ ವಿಮಾನ ಸಂಚಾರ ಆರಂಭಿಸಲೂ ಯೋಜನೆ ರೂಪಿಸಲಾಗಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 2023ರ ಜುಲೈನಲ್ಲಿ ಅತಿ ಹೆಚ್ಚು ಪ್ರಯಾಣಿಕರಿಗೆ ಸಾಕ್ಷಿಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜುಲೈನಲ್ಲಿ ಅತಿ ಹೆಚ್ಚು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಮಂಗಳೂರು ವಿಮಾನ ನಿಲ್ದಾಣ ನಿರ್ವಹಿಸಿದೆ.
ಜುಲೈನಲ್ಲಿ ವಿಮಾನ ನಿಲ್ದಾಣವು ಒಟ್ಟು 16,26,67 ಪ್ರಯಾಣಿಕರನ್ನು ನಿಭಾಯಿಸಿದ್ದು, ಇದರಲ್ಲಿ 10,74,55 ದೇಶೀಯ ಮತ್ತು 55,212 ಅಂತಾರಾಷ್ಟ್ರೀಯ ಪ್ರಯಾಣಿಕರು ಸೇರಿದ್ದಾರೆ. ಮೇ 1, 2023ರಂದು ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ ಕಾರ್ಯಾರಂಭ ಮಾಡಿದ ನಂತರ ವಿಮಾನ ನಿಲ್ದಾಣವು ದೇಶೀಯ ಸರಕುಗಳ ನಿರ್ವಹಣೆಯಲ್ಲಿ ಹೆಚ್ಚಳವನ್ನು ದಾಖಲಿಸಿದೆ. ವಿಮಾನ ನಿಲ್ದಾಣವು ಮೇ ತಿಂಗಳಲ್ಲಿ 246 ಟನ್‌ಗಳಷ್ಟು ವರ್ಗೀಕೃತ ಸರಕುಗಳನ್ನು ನಿರ್ವಹಿಸಿ, ಜೂನ್‌ನಲ್ಲಿ 332 ಟನ್‌ಗಳಿಗೆ ಏರಿತು. ಜುಲೈನಲ್ಲಿ 376 ಟನ್ ಐಸಿಟಿಯಲ್ಲಿ ನಿರ್ವಹಿಸಲಾದ ಹೆಚ್ಚಿನ ಸರಕುಗಳು ಹೊರಹೋಗಿವೆ. ಒಳಬರುವ ಸರಕುಗಳು ಹೆಚ್ಚಾಗಿ ಇ-ಕಾಮರ್ಸ್ ವಸ್ತುಗಳು, ಸ್ಟೇಷನರಿಗಳು ಮತ್ತು ಅಂಚೆ ಕಚೇರಿಯ ಅಂಚೆಗಳನ್ನು ಒಳಗೊಂಡಿರುತ್ತದೆ.