4ರಂದು ಪುರಭವನದಲ್ಲಿ ರಾಜ್ಯ ಮಟ್ಟದ ವಚನ ಸಾಹಿತ್ಯ ಸಮ್ಮೇಳನ

vachana
Published on

ಮಂಗಳೂರು: ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ನೇತೃತ್ವದಲ್ಲಿ ಬಸವ ಸಮಿತಿ ಅಧ್ಯಕ್ಷ ಡಾ. ಅರವಿಂದ ಜತ್ತಿ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಜ.4ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ’ ಜರುಗಲಿದೆ.

ಸಮ್ಮೇಳನದಲ್ಲಿ ಮೈಸೂರಿನ ಸುತ್ತೂರು ಮಠದ ಮಠಾೀಶ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಗುರುಪುರದ ಜಂಗಮ ಮಠದ ಮಠಾಧ್ಯಕ್ಷ ಶ್ರೀ ರುದ್ರಮುನಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬೆಳಗ್ಗೆ 8.30ಕ್ಕೆ ಶರವು ಶ್ರೀ ಮಹಾಗಣಪತಿ ದೇವಸ್ಥಾನದಿಂದ ‘ವಚನ ಸಾಹಿತ್ಯ ದಿಬ್ಬಣ’ ಹೊರಡಲಿದೆ. 10 ಗಂಟೆಗೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮೇಯರ್ ಮನೋಜ್ ಕುಮಾರ್ ರಾಷ್ಟ್ರಧ್ವಜಾರೋಹಣ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಕನ್ನಡ ಧ್ವಜಾರೋಹಣ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ಸಮ್ಮೇಳನದ ಧ್ವಜಾರೋಹಣ ಮಾಡಲಿದ್ದಾರೆ.

ಬೆಳಗ್ಗೆ 10.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮೈಸೂರಿನ ಸುತ್ತೂರು ಮಠಾಧೀಶ ಜಗದ್ಗುರು ಡಾ.ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಗುರುಪುರ ಜಂಗಮ ಸಂಸ್ಥಾನ ಮಠದ ಮಠಾಧ್ಯಕ್ಷ ಶ್ರೀ ರುದ್ರಮುನಿ ಮಹಾಸ್ವಾಮಿಗಳ ದಿವ್ಯಸಾನಿಧ್ಯ ವಹಿಸಲಿದ್ದಾರೆ.

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉಪಸ್ಥಿತರಿರುವರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವೆ ಲೀಲಾವತಿ ಆರ್. ಪ್ರಸಾದ್ ಸಭಾಧ್ಯಕ್ಷತೆ ವಹಿಸಲಿದ್ದು, ಕಟೀಲು ಹರಿನಾರಾಯಣ ಆಸ್ರಣ್ಣ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಶಾಸಕ ಡಾ. ವೈ. ಭರತ್ ಶೆಟ್ಟಿ ವಸ್ತು ಪ್ರದರ್ಶನದ ಉದ್ಘಾಟನೆ ಮಾಡುವರು. ಸಂಸದ ಕ್ಯಾ. ಬ್ರಿಜೇಶ್ ಚೌಟ ವಸ್ತು ಪ್ರದರ್ಶನದ ಮಾರಾಟ ಮಳಿಗೆ ಉದ್ಘಾಟಿಸುವರು. ಹಾಗೂ ಬೆಂಗಳೂರಿನ ಶಂಕರ್ ಬಿದರಿ ಅವರು ಸಾಕ್ಷ್ಯಚಿತ್ರ ಉದ್ಘಾಟಿಸುವರು. ವಿವಿಧ ಸಾಧಕರಿಗೆ ಕಾಯಕ ರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.

ಗೋಷ್ಠಿಗಳು

ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಮಂಗಳೂರು ಅಧ್ಯಕ್ಷೆ ಎಂತಳಾ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಅಧುನಿಕ ವನಚಗೋಷ್ಠಿ ನಡೆಯಲಿದೆ. ‘ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಅನುಸಂಧಾನ’ ವಿಷಯದ ಬಗ್ಗೆ ಚಿಂತನ ಗೋಷ್ಠಿಯಲ್ಲಿ ಡಾ. ವರದರಾಜ ಚಂದ್ರಗಿರಿ ವಿಷಯ ಪ್ರಸ್ತುತಿ ಮಾಡುವರು.‘ತುಳುನಾಡಿನಲ್ಲಿ ವೀರಶೈವ ಪರಂಪರೆ ಒಂದು ಐತಿಹಾಸಿಕ ನೋಟ’ ವಿಷಯದ ಬಗ್ಗೆ ಡಾ. ಪುಂಡಿಕಾ ಗಣಪತಿ ಭಟ್ ಮಾತನಾಡಲಿರುವರು. ‘ವನಚ ಸಾಹಿತ್ಯ ಅವಲೋಕನ’ ಎಂಬ ಗೋಷ್ಠಿ ಉಪನ್ಯಾಸಕ ರಘು ಇಡ್ಕಿದು ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು.

ಸಮಾರೋಪ ಸಮಾರಂಭ

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸಮಾರೋಪ ಭಾಷಣ ಮಾಡಲಿದ್ದಾರೆ. ಸಮ್ಮೇಳನಾಧ್ಯಕ್ಷ ಡಾ. ಅರವಿಂದ ಜತ್ತಿಯವರ ಉಪಸ್ಥಿತರಿರಲಿದ್ದು, ಅಕ್ಕಮಹಾದೇವಿ ವೀರಶೈವ ಮಹಾಸಂಘದ ಅಧ್ಯಕ್ಷೆ ಸುಮಾ ಮಾನ್ವಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ

ಜಾನಪದ ಗಾಯಕ ಮತ್ತು ಸಂಗೀತ ನಿರ್ದೇಶಕ ಕೆ.ಯುವರಾಜ್ ಶಿವಮೊಗ್ಗ ಮತ್ತು ಸಿಎ ಅಮೂಲ್ಯ ಮಲ್ಲಿಕಾರ್ಜುನ ಮಂಗಳೂರು ಅವರಿಂದ ‘ವಚನ ಗಾಯನ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮ, ಶರಣ ಸಾಹಿತ್ಯ ಕೃತಿಗಳ ಪ್ರದರ್ಶನ ಇದೆ. ಸಮೂಹ ವಚನ ಗಾಯನ ಸ್ಪರ್ಧೆ ಮತ್ತು ಸಮೂಹ ವಚನ ನೃತ್ಯ ಸ್ಪರ್ಧೆಗಳೂ ನಡೆಯಲಿವೆ ಎಂದರು.

ಪ್ರಧಾನ ಸಂಚಾಲಕ ಸುರೇಂದ್ರ ರಾವ್, ಅಕ್ಕಮಹಾದೇವಿ ವೀರಶೈವ ಮಹಾಸಂಘದ ಅಧ್ಯಕ್ಷೆ ಸುಮಾ ಮಾನ್ವಿ, ಕೋಶಾಧಿಕಾರಿ ಉಮಾ ಪಾಲಕ್ಷಪ್ಪ, ಡಾ.ಮೀನಾಕ್ಷಿ ರಾಮಚಂದ್ರ, ಪ್ರೊ.ಜಯಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net