

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮೂರನೇ ವರ್ಷದ ಸ್ಟ್ರೀಟ್ ಫುಡ್ ಫಿಯೇಸ್ಟಾ 2025 ಜನವರಿ 15 ರಿಂದ 19 ರ ವರೆಗೆ ಐದು ದಿನಗಳ ಕಾಲ ಮಂಗಳೂರು ನಗರದಲ್ಲಿ ನಡೆಯಲಿದೆ.
ಮಂಗಳೂರಿನ ಚೇತನಾ ವಿಶೇಷ ಮಕ್ಕಳ ಶಾಲೆಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಪ್ರತಿಷ್ಠಾನದ ಮಾರ್ಗದರ್ಶಕ ಶಾಸಕ ವೇದವ್ಯಾಸ್ ಕಾಮತ್ ಅವರು ಈ ಬಾರಿಯ ಸ್ಟ್ರೀಟ್ ಫುಡ್ ಫಿಯೇಸ್ಟಾದ ದಿನಾಂಕ ಮತ್ತು ಸ್ಥಳದ ಘೋಷಣೆ ಮಾಡಿದರು.
ಪ್ರಮುಖ ರಸ್ತೆಗಳಲ್ಲಿ ಸ್ಟ್ರೀಟ್ ಫುಡ್ ಫಿಯೇಸ್ಟಾ: ಕಳೆದ ಬಾರಿಯಂತೆ ನಾರಾಯಣಗುರು ಸರ್ಕಲ್, ಪಬ್ಬಾಸ್ ಐಸ್ ಕ್ರೀಮ್, ಹಿಂದಿ ಪ್ರಚಾರ
ಸಮಿತಿ ಸುತ್ತಮುತ್ತಲಿನ ಮಾರ್ಗ ಹಾಗೂ ಕರಾವಳಿ ಉತ್ಸವ ಮೈದಾನದಲ್ಲಿ ಆಹಾರಮೇಳ ಆಯೋಜಿಸಲಾಗಿದೆ. ಇದರ ಜೊತೆಗೆ ಮಕ್ಕಳಿಗೆ ವಿಶೇಷ ಪ್ಲೇ ಏರಿಯಾ, ಮನೋರಂಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆರ್ಕೆಸ್ಟ್ರಾ, ಹುಟ್ಟುಹಬ್ಬದ ಆಚರಣೆ, ಸೆಲ್ಫಿ ಝೋನ್ ಸಹಿತ ವಿವಿಧ ಕಾರ್ಯಕ್ರಮಗಳನ್ನು ಸ್ಥಳದಲ್ಲಿ ಆಯೋಜಿಸಲಾಗಿದೆ ಎಂದರು.
ವೆಜ್-ನಾನ್ ವೆಜ್ ಪ್ರತ್ಯೇಕ: ಪ್ರತಿನಿತ್ಯ ಸಂಜೆ 4 ಗಂಟೆಯಿಂದ ರಾತ್ರಿ 10.30 ರ ವರೆಗೆ ಸ್ಟ್ರೀಟ್ ಫುಡ್ ಫಿಯೇಸ್ಟಾ ನಡೆಯಲಿದೆ. ಪ್ರಾರಂಭ ಮತ್ತು ಅಂತ್ಯದ ದಿನಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಏರ್ಪಡಿಸಲಾಗಿದೆ. 250ಕ್ಕೂ ಹೆಚ್ಚು ಫುಡ್ ಸ್ಟಾಲ್ ಗಳಲ್ಲಿ ಕರಾವಳಿಯ ವಿಶೇಷ ತಿನಿಸುಗಳು ಮಾತ್ರವಲ್ಲದೆ ಬೇರೆ ರಾಜ್ಯಗಳ ಆಹಾರ ಸವಿಯಲು ಅವಕಾಶ ಕಲ್ಪಿಸಲಾಗಿದೆ. ವೆಜ್ ಮತ್ತು ನಾನ್ ವೆಜ್‌ಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಇದೆ. ಅಂಗಡಿಗಳನ್ನು ಹಾಕಲು ನೆಲ ಬಾಡಿಗೆ ವ್ಯವಸ್ಥೆ ಏರ್ಪಡಿಸಲಾಗುವುದು, ಆದರೆ ಕಳೆದ ಬಾರಿಯಂತೆ ಲಾಭಾಂಶ ಹಂಚಿಕೆ ವ್ಯವಸ್ಥೆ ಇರುವುದಿಲ್ಲ. ಆದರೆ ಸ್ಟ್ರೀಟ್‌ಫುಡ್ ಫಿಯೇಸ್ಟಾದಿಂದ ಲಾಭಾಂಶವಾದರೆ, ಆ ಮೊತ್ತವನ್ನು ಸಮಾಜಸೇವಾ ನಿಧಿಗೆ
ಬಳಸಿಕೊಳ್ಳಲು ತೀರ್ಮಾನಿಸಲಾಗುವುದು. ಈ ಬಾರಿ 250ಕ್ಕೂ ಅಧಿಕ ಸ್ಟಾಲ್‌ಗಳ ಗುರಿ ಇದೆ ಎಂದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ್ ಇದ್ದರು.
ಸಂಚಾರ ದಟ್ಟಣೆ ಇಲ್ಲ, ಸುಗಮ ಸಂಚಾರಕ್ಕೆ ಕ್ರಮ
ಈ ಬಾರಿ ಸ್ಟ್ರೀಟ್ ಫುಡ್ ಫಿಯೇಸ್ಟಾ ಸಲುವಾಗಿ ಐದು ದಿನಗಳ ಕಾಲ ಸಂಚಾರ ನಿಯಂತ್ರಣ ಹಾಗೂ ಸುಗಮ ಸಂಚಾರಕ್ಕೆ ಎಲ್ಲ ರೀತಿಯ ಏರ್ಪಾಟು ಮಾಡಲಾಗಿದೆ. ಪೊಲೀಸ್, ಕಂದಾಯ, ಲೋಕೋಪಯೋಗಿ ಹಾಗೂ ಮಹಾನಗರ ಪಾಲಿಕೆ ನೆರವಿನಲ್ಲಿ ಸ್ಟ್ರೀಟ್
ಫುಡ್ ಫಿಯೇಸ್ಟಾವನ್ನು ಅಚ್ಚುಕಟ್ಟಾಗಿ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೆ 25 ಲಕ್ಷ ರೂ. ಮೊತ್ತವನ್ನು ಬಾಡಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಲಾಗುವುದು. ಸಂಚಾರ ನಿರ್ವಹಣೆಗೂ ಪೊಲೀಸ್ ಇಲಾಖೆಗೆ ನಿಗದಿತ ಮೊತ್ತ ಪಾವತಿಸಲಾಗುತ್ತದೆ. ಸುಮಾರು ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಸುಗಮ ಸಂಚಾರ ವ್ಯವಸ್ಥೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದರು.